ನ್ಯೂಯಾರ್ಕ್ : ಲಸಿಕೆ ತಯಾರಿಕಾ ಸಂಸ್ಥೆ ಫಿಜರ್ ಮತ್ತು ಅದರ ಜರ್ಮನ್ ಪಾಲುದಾರ ಬಯೋನ್ಟೆಕ್ ಕೋವಿಡ್ ಲಸಿಕೆ ಕುರಿತು ಎರಡನೇ ಮಧ್ಯಂತರ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಸಂಸ್ಥೆಯ ಕೋವಿಡ್ ಲಸಿಕೆ ಶೇ.95ರಷ್ಟು ಪರಿಣಾಮಕಾರಿಯಾಗಿದ್ದು, ಹಿರಿಯ ವಯಸ್ಸಿನ ಅತ್ಯಂತ ದುರ್ಬಲ ವ್ಯಕ್ತಿಯನ್ನೂ ವೈರಸ್ನಿಂದ ಇದು ರಕ್ಷಿಸುತ್ತದೆ ಎಂದು ತಿಳಿಸಿದೆ.
BNT162b2 ಕೋವಿಡ್ ಲಸಿಕೆಯ ಪ್ರಾಥಮಿಕ ಪರಿಣಾಮ ವಿಶ್ಲೇಷಣೆ ವೇಳೆ, ಮೊದಲ ಡೋಸ್ ನೀಡಿ 28 ದಿನಗಳ ಬಳಿಕ ಸೋಂಕು ದೃಢಪಟ್ಟ ವ್ಯಕ್ತಿ ಮೇಲೆ ಲಸಿಕೆ ಪರಿಣಾಮ ಬೀರಿರುವುದು ಕಂಡು ಬಂದಿದೆ. 170 ದೃಢಪಟ್ಟ ಕೋವಿಡ್ ಪ್ರಕರಣಗಳನ್ನು ಮೌಲ್ಯಮಾಪನ ಮಾಡಲಾಗಿದೆ. ಆ ಪೈಕಿ ಪ್ಲೇಸಿಬೊ ಗುಂಪಿನಲ್ಲಿ 162 ಮತ್ತು ಲಸಿಕೆ ಗುಂಪಿನಲ್ಲಿ 8 ಕಂಡು ಬಂದಿದೆ ಎಂದು ಕಂಪನಿ ತಿಳಿಸಿದೆ.
ನವೆಂಬರ್ 9 ರಂದು ಫಿಜರ್ ಸಂಸ್ಥೆ ತನ್ನ ಲಸಿಕೆ ಶೇ.90 ರಷ್ಟು ಪರಿಣಾಮಕಾರಿಯಾಗಿದೆ ಎಂದು ಘೋಷಿಸಿದ ಒಂದು ವಾರದ ನಂತರ ಈ ಪ್ರಕಟಣೆ ಹೊರ ಬಂದಿದೆ. ಮೊದಲ ಫಲಿತಾಂಶ ಒಟ್ಟು 43 ಸಾವಿರಕ್ಕೂ ಅಧಿಕ ಸ್ವಯಂಸೇವಕರ ಪೈಕಿ 100 ರಷ್ಟು ಜನರ ಮಾಹಿತಿ ಆಧರಿಸಿತ್ತು.
ಫಿಜರ್-ಬಯೋನ್ಟೆಕ್ mRNA ತಂತ್ರಜ್ಞಾನ ಬಳಸುತ್ತದೆ. ಅಂದರೆ, ಈ ಸಂಸ್ಥೆಯ ಕೋವಿಡ್ ಲಸಿಕೆ ನೇರವಾಗಿ ಕೋವಿಡ್ ವೈರಸ್ ವಿರುದ್ಧ ಹೋರಾಡಲ್ಲ. ಬದಲಾಗಿ, ಸೋಂಕಿತನ ದೇಹದಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ವೈರಸ್ ವಿರುದ್ಧ ಹೋರಾಡಲು ಪ್ರೇರೇಪಿಸುತ್ತದೆ.