ವಾಷಿಂಗ್ಟನ್: ಅಫ್ಘಾನಿಸ್ತಾನದಲ್ಲಿ 20 ವರ್ಷಗಳ ಯುದ್ಧವನ್ನು ಕೊನೆಗೊಳಿಸಿ ಅಮೆರಿಕ ವಾಪಸ್ ಆಗುತ್ತಿರುವ ವೇಳೆ ಕಾಬೂಲ್‌ನಲ್ಲಿ 10 ನಾಗರಿಕರನ್ನು ಕೊಂದ ಯುಎಸ್ ಡ್ರೋನ್ ದಾಳಿಯ ವಿಡಿಯೋ ತುಣುಕನ್ನು ಪೆಂಟಗನ್ ಸಾರ್ವಜನಿಕವಾಗಿ ಬಿಡುಗಡೆ ಮಾಡಿದೆ.
ನ್ಯೂಯಾರ್ಕ್ ಟೈಮ್ಸ್, ಅಮೆರಿಕ ಸೆಂಟ್ರಲ್ ಕಮಾಂಡ್ ವಿರುದ್ಧ ಫ್ರೀಡಂ ಆಫ್ ಇನ್ಫರ್ಮೇಷನ್ ಆಕ್ಟ್ ಮೊಕದ್ದಮೆ ಹೂಡಿ ಈ ವಿಡಿಯೋ ತುಣುಕನ್ನು ಪಡೆದುಕೊಂಡು, ತನ್ನ ವೆಬ್‌ಸೈಟ್‌ಗೆ ಪೋಸ್ಟ್ ಮಾಡಿದೆ. ಇದು ಆಗಸ್ಟ್ 29 ರ ಮುಷ್ಕರ ಕುರಿತಾದ ದೃಶ್ಯವನ್ನು ಒಳಗೊಂಡಿದೆ. ಸುಮಾರು 25 ನಿಮಿಷಗಳ ವಿಡಿಯೋ ಇದಾಗಿದ್ದು, ಡ್ರೋನ್ ನಾಗರಿಕರ ಕಾರಿಗೆ ಅಪ್ಪಳಿಸುವ ದೃಶ್ಯ ಮತ್ತು ಮುಷ್ಕರ ನಡೆಯುತ್ತಿರುವ ವೇಳೆ ಸಮೀಪದಲ್ಲಿ ಚಲಿಸುತ್ತಿರುವ ವ್ಯಕ್ತಿಗಳು ಹಾಗೂ ಮುಷ್ಕರದ ದೃಶ್ಯವನ್ನು ತೋರಿಸುತ್ತದೆ.
ಆಗಸ್ಟ್ 29 ರಂದು ಅಫ್ಘಾನಿಸ್ಥಾನದ ಕಾಬೂಲ್ ಏರ್ಪೋರ್ಟ್ ಮೇಲೆ ಐಸಿಸ್-ಕೆ ಉಗ್ರರನ್ನು ಗುರಿಯಾಗಿಸಿಕೊಂಡು ಅಮೆರಿಕ ಡ್ರೋನ್ ದಾಳಿ ಮಾಡಿತ್ತು. ಘಟನೆಯಲ್ಲಿ ಮಕ್ಕಳು ಸೇರಿದಂತೆ 10 ಮಂದಿ ನಾಗರಿಕರು ಮೃತಪಟ್ಟಿದ್ದರು. ಇದೊಂದು ದುರಂತ. ಇದು ನಮ್ಮಿಂದಾದ ತಪ್ಪು. ನಾನು ಇದಕ್ಕೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ ಎಂದು ಅಮೆರಿಕ ಉನ್ನತ ಮಿಲಿಟರಿ ಕಮಾಂಡರ್ ಜನರಲ್ ಫ್ರಾಂಕ್ ಮೆಕೆಂಜಿ ಅಂದು ದುರಂತದ ಹೊಣೆ ಹೊತ್ತಿದ್ದರು.
ಆ.26 ರಂದು ಕಾಬೂಲ್ ವಿಮಾನ ನಿಲ್ದಾಣದ ಹೊರಗಡೆ ಐಸಿಸ್-ಕೆ ಉಗ್ರರು ನಡೆಸಿದ ಅವಳಿ ಆತ್ಮಾಹುತಿ ದಾಳಿಯಲ್ಲಿ ಅಮೆರಿಕದ 13 ಸೇನಾ ಸಿಬ್ಬಂದಿ ಸೇರಿ ನೂರಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು. 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಇದಕ್ಕೆ ಪ್ರತೀಕಾರವಾಗಿ ಆ.29 ರಂದು ಅಮೆರಿಕ ಕಾಬೂಲ್‌ನಲ್ಲಿ ಡ್ರೋನ್ ದಾಳಿ ನಡೆಸಿತ್ತು.