ನ್ಯೂಯಾರ್ಕ್: ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ಸೋಂಕಿನಿಂದ ಬಹುದೊಡ್ಡ ಮಟ್ಟದಲ್ಲಿ ಮಕ್ಕಳು ಪಾರಾಗಿದ್ದಾರೆ. ಆದರೆ ಇದು ಸಾಮಾಜಿಕ ಮತ್ತು ಆರ್ಥಿಕವಾಗಿ ಕೋಟ್ಯಂತರ ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.
ಈ ಬಗ್ಗೆ ವರದಿ ಬಿಡುಗಡೆ ಮಾಡಿರುವ ವಿಶ್ವಸಂಸ್ಥೆ, ಕೋವಿಡ್-19 ಮಕ್ಕಳ ಹಕ್ಕುಗಳ ಬಿಕ್ಕಟ್ಟಿಗೆ ಕಾರಣವಾಗಲಿದೆ. ಇದು ಎಲ್ಲ ದೇಶಗಳಲ್ಲಿನ ಎಲ್ಲ ವಯಸ್ಸಿನ ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದೆ. ಮಕ್ಕಳ ಖರ್ಚು ಹೆಚ್ಚಾಗಲಿದೆ ಎಂದು ಅಂದಾಜಿಸಿರುವ ಈ ಸಂಸ್ಥೆ, ನಿರಾಶಿತ ಕೇಂದ್ರ, ಕೊಳಚೆ ಪ್ರದೇಶ, ಬಂಧನ ಕೇಂದ್ರಗಳಲ್ಲಿನ ಮಕ್ಕಳು ಹಾಗೂ ಯುವ ವಿಕಲಚೇತನರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಎಚ್ಚರಿಕೆಯ ಗಂಟೆ ಬಾರಿಸಿದೆ.
ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಹೇಳಿಕೆಯ ವಿಡಿಯೋ ಬಿಡುಗಡೆ ಮಾಡಲಾಗಿದ್ದು, ಮಹಾಮಾರಿ ಕೊರೊನಾ ವೈರಸ್ ವಿಶ್ವದ ಮಕ್ಕಳನ್ನು ಅಪಾಯಕ್ಕೆ ಸಿಲುಕಿಸಲಿದೆ. ಪೋಷಕರು, ಎಲ್ಲಾ ಮಟ್ಟದ ನಾಯಕರು ಮಕ್ಕಳನ್ನು ರಕ್ಷಿಸಬೇಕಿದೆ ಎಂದು ಹೇಳಿದ್ದಾರೆ. ಸಮುದಾಯಗಳ ಲಾಕ್‌ಡೌನ್‌ನಿಂದ ಶಾಲೆಗಳಿಂದ ಹೊರಗುಳಿದಿರುವ ಬಹುತೇಕ ವಿದ್ಯಾರ್ಥಿಗಳಿಗೆ ಕುಟುಂಬದ ಒತ್ತಡ ಕೂಡ ಹೆಚ್ಚಾಗಿದೆ. ಮನೆಯ ಆದಾಯ ಪ್ರಮಾಣ ಕಡಿಮೆಯಾಗಿರುವುದರಿಂದ ಬಡ ಕುಟುಂಬಗಳ ಸಂಖ್ಯೆ ಹೆಚ್ಚಾಗಲಿದೆ. ಅಗತ್ಯ ಆರೋಗ್ಯ ಮತ್ತು ಆಹಾರ ಪದಾರ್ಥಗಳ ಕೊರತೆಯಿಂದ ವಿಶೇಷವಾಗಿ ಮಕ್ಕಳ ಮೇಲೆ ತೀವ್ರ ತರದ ಪರಿಣಾಮ ಉಂಟುಮಾಡಲಿದೆ ಗುಟೆರೆಸ್ ಎಚ್ಚರಿಸಿದ್ದಾರೆ.
ಕೋವಿಡ್19 ಮಹಾಮಾರಿಯಿಂದ ಜಾಗತಿಕ ಮಟ್ಟದಲ್ಲಿ ಆರ್ಥಿಕತೆ ಕುಸಿತ ಕಂಡಿದೆ. ಇದು 2020ರಲ್ಲಿ ಸಾವಿರಾರು ಮಕ್ಕಳ ಸಾವಿಗೆ ಕಾರಣವಾಗಬಹುದು. ಮಾತ್ರವಲ್ಲದೇ ಹಿಂದಿನ ಎರಡು ಮೂರು ವರ್ಷಗಳಲ್ಲಿ ಕಡಿಮೆಯಾಗಿದ್ದ ಮಕ್ಕಳ ಸಾವಿನ ಸಂಖ್ಯೆಯ ಫಲಿತಾಂಶ ಇದೊಂದೇ ವರ್ಷದಲ್ಲಿ ವ್ಯತಿರಿಕ್ತವಾಗಲಿದೆ. 2011ರಲ್ಲಿ ಹೆಚ್ಚುವರಿಯಾಗಿ ಸಾವಿರಾರು ಮಕ್ಕಳು ಸಾವನ್ನಪ್ಪಲಿದ್ದಾರೆ ಎಂದು ಮೂವರು ಖ್ಯಾತ ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ. ಆರ್ಥಿಕ ಹಿಂಜರಿತ ಪರಿಣಾಮದಿಂದ ಆದಾಯ ಬಗ್ಗೆ ಪರಿಶೀಲನೆ ನಡೆಸಿರುವ ತಜ್ಞರಾದ ಸರಾ ಬೈರ್ಡ್, ಜೆಡ್ ಫ್ರೈಡ್‌ಮನ್ ಮತ್ತು ನಾರ್ಬರ್ಟ್ ರಿಡ್ಜರ್ ಅವರು ಸರ್ಕಾರಗಳಿಗೆ ವರದಿ ನೀಡಿದ್ದಾರೆ. ಹೀಗಾಗಿ ಅತ್ಯಂತ ಹೀನಾಯ ಸ್ಥಿತಿಯಲ್ಲಿರುವ ಮಕ್ಕಳು ಮತ್ತು ಯುವಕರಿಗೆ ಆರ್ಥಿಕ ನೆರವು ನೀಡುವ ಮೂಲಕ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಗುಟೆರೆಸ್ ಎಲ್ಲಾ ರಾಷ್ಟ್ರಗಳನ್ನು ಒತ್ತಾಯಿಸಿದ್ದಾರೆ.
ಅತಿ ಕಡಿಮೆ ಆದಾಯ ಇರುವ ಕುಟುಂಬಗಳಿಗೆ ಹಣದ ಸಹಾಯ ಮಾಡುವಂತೆಯೂ ಕೋರಿದ್ದಾರೆ. ಈಗಾಗಲೇ 188 ದೇಶಗಳು ಕೋವಿಡ್-19 ನಿಂದ ಶಾಲೆಗಳನ್ನು ಬಂದ್ ಮಾಡಿವೆ. ಇದು 1.5 ಬಿಲಿಯನ್ ಮಕ್ಕಳು, ಯುವಕರ ಮೇಲೆ ಪರಿಣಾಮ ಬೀರಿದೆ. 143 ದೇಶಗಳ 369 ಮಿಲಿಯನ್ ಶಾಲಾ ಮಕ್ಕಳು ಶಾಲೆಯಲ್ಲಿ ನೀಡುತ್ತಿದ್ದ ಪೌಷ್ಠಿಕಾಂಶದ ಊಟ ಇಲ್ಲದೆ ಬೇರೆ ಮಾರ್ಗವನ್ನು ಅವಲಂಭಿಸಿದ್ದಾರೆ ಎಂದು ಮತ್ತೊಂದು ವರದಿ ಹೇಳಿದೆ.
ಕೆಲವು ಶಾಲೆಗಳು ಆನ್‌ಲೈನ್ ಕಲಿಕೆಯನ್ನು ನೀಡುವುದಾಗಿ ಹೇಳುತ್ತಿವೆ. ಆದ್ರೆ ಇಂಟರ್‌ನೆಟ್ ಸೌಲಭ್ಯ ಸೇರಿದಂತೆ ಹೆಚ್ಚು ವೆಚ್ಚದ ಸೇವೆಗಳು ಅನಾನುಕೂಲರವಾಗಿವೆ. ಇದು ಸಂಸ್ತತ್ರರು ಮತ್ತು ಸಂಬಂಧ ಪಟ್ಟ ನಾಯಕರ ದೇಶಿಯ ಉಲ್ಲಂಘನೆಯಾಗಲಿದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.