ಸ್ಯಾನ್ ಫ್ರಾನ್ಸಿಸ್ಕೊ /ಯುಎಸ್: ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು (ಎನ್‌ಆರ್‌ಐ) ಭಾರತ ಸರ್ಕಾರ ಪರಿಚಯಿಸಿದ ನೂತನ ಕೃಷಿ ಕಾನೂನುಗಳಿಗೆ ಬೆಂಬಲ ವ್ಯಕ್ತಪಡಿಸಿ ಕಾರ್ ರ‍್ಯಾಲಿ ಆಯೋಜಿಸಿದ್ದರು.
ಮಿಷನ್ ಸ್ಯಾನ್ ಜೋಶ್ ಹೈಸ್ಕೂಲ್ ಬಳಿಯ ಪಾರ್ಕಿಂಗ್ ಸ್ಥಳದಲ್ಲಿ ಈ ಕಾರ್ ರ‍್ಯಾಲಿ ಹಮ್ಮಿಕೊಳ್ಳಲಾಗಿತ್ತು. ಕೇಂದ್ರದ ಹೊಸ ಕೃಷಿ ಕಾನೂನುಗಳಿಗೆ ತಮ್ಮ ಬೆಂಬಲ ಸೂಚಿಸಿ ನೂರಾರು ಅನಿವಾಸಿ ಭಾರತೀಯರು ರ‍್ಯಾಲಿಯಲ್ಲಿ ಭಾಗವಹಿಸಿದ್ರು. ಇನ್ನು ರ್ಯಾಲಿ ವೇಳೆ "ವಂದೇ ಮಾತರಂ" ಘೋಷಣೆ ಕೂಗಲಾಯಿತು.
ಇನ್ನು ಈ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಭಾರತದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ವಿದೇಶಾಂಗ ಇಲಾಖೆ ವಕ್ತಾರರು "ಶಾಂತಿಯುತ ಪ್ರತಿಭಟನೆಗಳು ಯಾವುದೇ ಪ್ರಜಾಪ್ರಭುತ್ವದ ವಿಶಿಷ್ಟ ಲಕ್ಷಣ ಮತ್ತು ಭಾರತೀಯ ಸುಪ್ರೀಂ ಕೋರ್ಟ್ ಸಹ ಇದನ್ನೇ ಹೇಳಿದೆ" ಎಂದು ಹೇಳಿದರು. ಭಾರತದ ಮಾರುಕಟ್ಟೆಗಳ ದಕ್ಷತೆಯನ್ನು ಸುಧಾರಿಸುವ ಮತ್ತು ಹೆಚ್ಚಿನ ಖಾಸಗಿ ವಲಯದ ಹೂಡಿಕೆಯನ್ನು ಆಕರ್ಷಿಸುವ ಕ್ರಮಗಳನ್ನು ಯುನೈಟೆಡ್ ಸ್ಟೇಟ್ಸ್ ಸ್ವಾಗತಿಸುತ್ತದೆ ಎಂದು ವಕ್ತಾರರು ಹೇಳಿದರು.