ಕಚ್ (ಗುಜರಾತ್): ಮಂಗಳ ಗ್ರಹದಲ್ಲಿ ಕಂಡು ಬರುವ ಉಪ್ಪಿನಂತಹ ಸ್ಫಟಿಕದ ಮೇಲ್ಮೈಯನ್ನು ಅಧ್ಯಯನ ಮಾಡಲು ನಾಸಾದ ವಿಜ್ಞಾನಿಗಳ ತಂಡವು ಗುಜರಾತ್‌ನ ಕಚ್‌ನಲ್ಲಿರುವ ಬಿಳಿ ಮರುಭೂಮಿಗೆ ಭೇಟಿ ನೀಡುವ ಸಾಧ್ಯತೆಯಿದೆ. ಈ ತಂಡವು ಮಾರ್ಚ್‌ನಲ್ಲಿ ಭೇಟಿ ನೀಡುವ ಸಾಧ್ಯತೆಯಿದ್ದು, ಇಲ್ಲಿ ಸರಣಿ ಪರೀಕ್ಷೆಗಳನ್ನು ಕೈಗೊಳ್ಳಲಾಗುತ್ತದೆ ಎನ್ನಲಾಗಿದೆ.
ಸಂಪೂರ್ಣ ಸಂಶೋಧನೆಯ ಕುರಿತು ಈಟಿವಿ ಭಾರತ್‌ಗೆ ಮಾಹಿತಿ ನೀಡಿದ ಕಚ್ ವಿಶ್ವವಿದ್ಯಾನಿಲಯದ ಭೂಮಿ ಮತ್ತು ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಮಹೇಶ್ ಠಾಕ್ರೆ, ನಾಸಾ ಮತ್ತು ಇಸ್ರೋದಂತಹ ಸಂಶೋಧನಾ ಕೇಂದ್ರಗಳು ಮಂಗಳ ಗ್ರಹದಲ್ಲಿ ಕಂಡು ಬರುವ ಉಪ್ಪಿನಂತಹ ಸ್ಫಟಿಕದ ಮೇಲ್ಮೈ ಸಂಶೋಧನಾ ಕಾರ್ಯದಲ್ಲಿ ತೊಡಗಿಕೊಂಡಿವೆ.
ಇದರ ಭಾಗವಾಗಿ ನಾಸಾ ತಂಡವು 2013, 2014, 2015 ಮತ್ತು 2019 ರಲ್ಲಿ ಕಚ್‌ಗೆ ಸಂಶೋಧನೆಗೆ ಬಂದಿತ್ತು. ಈ ಬಾರಿಯೂ ಬರುವ ಸಾಧ್ಯತೆ ಇದೆ ಎಂದಿದ್ದಾರೆ.
ನಾಸಾ ಮಂಗಳ ಗ್ರಹಕ್ಕೆ ಕಳುಹಿಸಿರುವ ರೋವರ್ ಮಂಗಳನ ಮೇಲ್ಮೈ ಚಿತ್ರಗಳನ್ನು ಕಳುಹಿಸಿಕೊಟ್ಟಿದೆ. ಆದರೆ, ಮಂಗಳನ ಮೇಲ್ಮೈಯನ್ನು ಅಧ್ಯಯನ ಮಾಡಲು ಯಾವಾಗಲೂ ಅಲ್ಲಿಗೆ ಹೋಗಲು ಸಾಧ್ಯವಿಲ್ಲ.
ಹೀಗಾಗಿ ರೋವರ್ ಕಳುಹಿಸಿರುವ ಚಿತ್ರಗಳ ಆಧಾರದಲ್ಲಿ ಕಚ್ ಜಿಲ್ಲೆಯ 'ಮಾತಾ ನೋ ಮಧ್' ಗ್ರಾಮವನ್ನು ಹೋಲುವಂತೆ ಕಂಡುಬಂದಿದೆ. ಅದೇ ಸಮಯದಲ್ಲಿ, ಲೂನಾದಲ್ಲಿನ ಕುಳಿಯಲ್ಲಿ ಮತ್ತು ನಂತರ ಕಚ್‌ನ ಮರುಭೂಮಿಯಲ್ಲಿ ಕಂಡುಬಂದ ಉಪ್ಪಿನ ಹರಳು ಮಂಗಳದಲ್ಲಿ ಕಂಡು ಬರುವಂತೆಯೇ ಇದೆ ಎಂದು ಠಾಕ್ರೆ ಹೇಳಿದ್ದಾರೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
23,000 ರಿಂದ 24,000 ಚದರ ಕಿ.ಮೀ ವರೆಗೆ ಹರಡಿರುವ ಕಚ್‌ನ ಮಹಾ ಮರುಭೂಮಿಯು ಭೌಗೋಳಿಕ ಜಲಾನಯನ ಪ್ರದೇಶವಾಗಿದೆ. ಇದರಲ್ಲಿ ವಿವಿಧ ನದಿಗಳು ಮತ್ತು ವಿವಿಧ ಸಮಯಗಳಲ್ಲಿ ಸಮುದ್ರಗಳ ನೀರನ್ನು ಸಂಗ್ರಹಿಸಿದೆ. ಭೌಗೋಳಿಕ ಪರಿಸ್ಥಿತಿಗಳಿಂದಾಗಿ ನೀರು ಬೇರೆಲ್ಲಿಯೂ ಹೋಗಲು ಸಾಧ್ಯವಾಗದಿದ್ದಾಗ ಅದು ಒಣಗುತ್ತದೆ. ಆ ಬಳಿಕ ಮರುಭೂಮಿಯಲ್ಲಿ ಉಪ್ಪಿನ ಪದರವು ರೂಪುಗೊಳ್ಳುತ್ತದೆ.
ನೀರು ಒಣಗಿದಾಗ ಮತ್ತು ಉಪ್ಪಿನ ಪದರವು ಹೆಪ್ಪುಗಟ್ಟಿದಾಗ ಅದರ ಮೇಲೆ ಉಳಿದಿರುವ ನೀರು ಹೈಪರ್ಸಲೈನ್ ಆಗುತ್ತದೆ. ಉಪ್ಪಿನ ಹರಳುಗಳು ಅಲ್ಲಿ ರೂಪುಗೊಳ್ಳುತ್ತವೆ. ಇಂತಹ ವಾತಾವರಣದಲ್ಲಿ ಉಪ್ಪಿನ ಹರಳುಗಳು ರೂಪುಗೊಂಡಾಗ ಸೋಡಿಯಂ ಕ್ಲೋರೈಡ್ ಜೊತೆಗೆ ಇತರ ಕ್ಲೋರೈಡ್‌ಗಳು ಮತ್ತು ಸಲ್ಫೇಟ್‌ಗಳು ಇರುತ್ತವೆ.
ಇದರಿಂದಾಗಿ ವಿವಿಧ ರೀತಿಯ ಲವಣಗಳು ಅಲ್ಲಿ ಉಳಿಯುತ್ತವೆ. ಇದರ ಪರಿಣಾಮವಾಗಿ ಅನೇಕ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ಹೈಪರ್ಸಲೈನ್ ನೀರಿನಲ್ಲಿ ಸಂಗ್ರಹವಾಗಿ ಬಳಿಕ ಇವುಗಳ ಸಂಖ್ಯೆಯನ್ನು ಹೆಚ್ಚಿಸುತ್ತವೆ.
ಕಚ್‌ನಲ್ಲಿ ವಿವಿಧ ಲವಣಗಳಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯುವ ಅನೇಕ ಸ್ಥಳಗಳಿವೆ. ಪ್ಲಾನೆಟರಿ ಜಿಯಾಲಜಿ ವಿಷಯದ ಕುರಿತು ಕಚ್ ವಿಶ್ವವಿದ್ಯಾಲಯ ಮತ್ತು ಅಮಿಟಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ 6 ರಿಂದ 12 ತಿಂಗಳ ಕೋರ್ಸ್ ಸಹ ನಡೆಯಲಿದೆ.
ಕೋರ್ಸ್ ಸಮಯದಲ್ಲಿ, ಮಂಗಳದ ಮೇಲೆ ವ್ಯಾಪಕವಾದ ಅಧ್ಯಯನವನ್ನು ಮಾಡಲಾಗುತ್ತದೆ. ಕಚ್‌ನ ಅನೇಕ ಪ್ರದೇಶಗಳನ್ನು ಸಹ ಅಧ್ಯಯನಕ್ಕೆ ಒಳಪಡಿಸಲಾಗುತ್ತದೆ. ಕಚ್‌ನ 'ಮಾತಾ ನೋ ಮಾಧ್', ಲೂನಾ ಕ್ರೇಟರ್ ಸರೋವರ, ಧೋಲಾವಿರಾ ಹಾಗೂ ಕಚ್‌ನ ಮಹಾ ಮರುಭೂಮಿಯ ಭೂಮಿಯಲ್ಲಿ ಅಧ್ಯಯನವನ್ನು ನಡೆಸಲಾಗುವುದು ಎಂದು ಠಾಕ್ರೆ ಹೇಳಿದ್ದಾರೆ.