ವಾಷಿಂಗ್ಟನ್: ಇರಾಕ್‌ನಲ್ಲಿನ ಅಮೆರಿಕ ಪಡೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದಕ್ಕೆ ಪ್ರತಿಯಾಗಿ ಅಮೆರಿಕ, 'ಇರಾನ್ ವಿರುದ್ಧ ಹೆಚ್ಚುವರಿ ಶಿಕ್ಷೆಯಾಗಿ ಆರ್ಥಿಕ ನಿರ್ಬಂಧಗಳನ್ನು ವಿಧಿಸಲಾಗುತ್ತಿದೆ' ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
'ಇರಾನಿನ ಆಕ್ರಮಣಕ್ಕೆ ಪ್ರತಿಕ್ರಿಯೆಯಾಗಿ ನಾವು ಆಯ್ಕೆಗಳ ಮೌಲ್ಯಮಾಪನ ಮುಂದುವರಿಸಿದ್ದೇವೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಇರಾನಿನ ಆಡಳಿತದ ಮೇಲೆ ಅಮೆರಿಕ ಹೆಚ್ಚುವರಿ ಶಿಕ್ಷೆಯಾಗಿ ಆರ್ಥಿಕ ನಿರ್ಬಂಧಗಳನ್ನು ವಿಧಿಸುತ್ತಿದೆ. ಇರಾನ್ ತನ್ನ ನಡವಳಿಕೆ ಬದಲಾಯಿಸುವವರೆಗೆ ಈ ಪ್ರಬಲ ನಿರ್ಬಂಧಗಳು ಮುಂದುವರಿಯಲಿವೆ' ಎಂದು ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ.
ಕಳೆದ ವಾರ ಬಾಗ್ದಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಅಮೆರಿಕ ,ಪಡೆ ಡ್ರೋಣ್ ದಾಳಿಯ ಮೂಲಕ ಇರಾನ್ ಮಿಲಿಟರಿಯ ಉನ್ನತ ಅಧಿಕಾರಿ ಜನರಲ್ ಸೊಲೈಮಾನಿ ಅವರನ್ನು ಹತ್ಯೆ ಮಾಡಿತ್ತು. ಇದಕ್ಕೆ ಪ್ರತೀಕಾರವಾಗಿ ಇರಾನ್, ಇರಾಕ್ನಲ್ಲಿರುವ ಅಮೆರಿಕ ಸೈನಿಕರ ನೆಲೆಗಳನ್ನು ಗುರಿಯಾಗಿಸಿಕೊಂಡು ಬುಧವಾರ ಹನ್ನೆರಡು ಕ್ಷಿಪಣಿ ದಾಳಿ ನಡೆಸಿತ್ತು.
ಟ್ರಂಪ್ ತಮ್ಮ ಭಾಷಣದಲ್ಲಿ ಪದೆ ಪದೇ ಹತ್ಯೆಯ ವಿಚಾರವನ್ನು ಪ್ರಸ್ತಾಪಿಸಿ, 'ಹಿಂಸಾಚಾರವನ್ನು ಕಡಿಮೆ ಮಾಡುವ ಉದ್ದೇಶದಿಂದ ಡ್ರೋಣ್ ದಾಳಿ ನಡೆಸಬೇಕಾಯಿತು ಎಂದು ಒತ್ತಿ ಹೇಳಿದರು.
2013ರಲ್ಲಿ ಮೂರ್ಖ ಇರಾನ್ ಪರಮಾಣು ಒಪ್ಪಂದಕ್ಕೆ ಸಹಿ ಹಾಕಿದ ನಂತರ ಇರಾನ್‌ನ ಹಗೆತನ ಹೆಚ್ಚಾಗಿದೆ. ಅವರಿಗೆ 150 ಬಿಲಿಯನ್ ಡಾಲರ್ ನೀಡಲಾಯಿತು. ಆದರೆ, ಅವರು ಅಮೆರಿಕಕ್ಕೆ ಧನ್ಯವಾದ ಹೇಳುವ ಬದಲು ಅಮೆರಿಕದ ಅಂತ್ಯವನ್ನು ಜಪಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಇರಾನ್ ಪರಮಾಣು ಒಪ್ಪಂದ (2015) ಎಂದೂ ಕರೆಯಲ್ಪಡುವ ಜೆಸಿಪಿಒಎ ಶೀಘ್ರದಲ್ಲೇ ಮುಕ್ತಾಯಗೊಳ್ಳುತ್ತದೆ. ಪರಮಾಣು ತ್ಯಜಿಸಲು ಇರಾನ್‌ಗೆ ಸ್ಪಷ್ಟ ಸಂದೇಶ ನೀಡಲಾಗುತ್ತದೆ. ಇರಾನ್ ತನ್ನ ಪರಮಾಣು ಕೇಂದ್ರೀತ ಮಹತ್ವಾಕಾಂಕ್ಷೆಗಳು ಮತ್ತು ಭಯೋತ್ಪಾದನೆಗೆ ನೀಡುತ್ತಿರುವ ಬೆಂಬಲವನ್ನು ತ್ಯಜಿಸಬೇಕು ಎಂದು ಹೇಳಿದರು.
ಚೀನಾ, ಇಂಗ್ಲೆಂಡ್, ಫ್ರಾನ್ಸ್ ಮತ್ತು ರಷ್ಯಾ ಕೂಡ ಈ ವಾಸ್ತವವನ್ನು ಅರಿತುಕೊಳ್ಳಬೇಕು. ಇರಾನ್ ಒಪ್ಪಂದದ ನೆನಪಿನಿಂದ ದೂರವಿರಬೇಕು ಎಂದು ಟ್ರಂಪ್ ತಿಳಿಸಿದರು.