ವಾಷಿಂಗ್ಟನ್: ಅಫ್ಘಾನಿಸ್ತಾವನ್ನು ತಾಲಿಬಾನ್ ಉಗ್ರರು ಸಂಪೂರ್ಣವಾಗಿ ವಶಪಡಿಸಿಕೊಂಡ ಬಳಿಕ ಅಮೆರಿಕ, ಭಾರತ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳು ತಮ್ಮ ದೇಶ ಪ್ರಜೆಗಳನ್ನು ಅಲ್ಲಿಂದ ವಾಪಸ್ ಕರೆಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿದ್ದವು. ಈ ಹಿನ್ನೆಲೆಯಲ್ಲಿ ಆಗಸ್ಟ್ 14ರಿಂದ ಈವರೆಗೆ 1 ಲಕ್ಷಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರಿಸಲಾಗಿದೆ ಎಂದು ವೈಟ್‌ಹೌಸ್ ಮಾಹಿತಿ ನೀಡಿದೆ.
ತಾಲಿಬಾನ್ ರಾಷ್ಟ್ರವಾಗಿ ಬದಲಾಗಿರುವ ಅಫ್ಘಾನಿಸ್ತಾನದಿಂದ 1,00,100 ಮಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಶ್ವೇತಭವನ ತನ್ನ ಹೇಳಿಕೆಯನ್ನು ತಿಳಿಸಿದೆ. ಈ ನಡುವೆ ನಿನ್ನೆ ಸಂಜೆ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು 13 ಮಂದಿ ಅಮೆರಿಕ ಸೈನಿಕರು ಸೇರಿದಂತೆ ಹಲವರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಕಾಬೂಲ್ ಬ್ಲಾಸ್ಟ್: ಅಮೆರಿಕ ಸೈನಿಕರು ಸೇರಿ 60 ಜನ ಹತ, ದಾಳಿಯ ಹೊಣೆ ಹೊತ್ತ ISIS-K
ನಿನ್ನೆ ನಡೆದ 12 ಗಂಟೆಗಳ ಕಾರ್ಯಾಚರಣೆಯಲ್ಲಿ ಕಾಬೂಲ್ ವಿಮಾನ ನಿಲ್ದಾಣದಿಂದ ಸುಮಾರು 7,500 ಮಂದಿಯನ್ನು ಏರ್‌ಲಿಫ್ಟ್ ಮಾಡಲಾಗಿದೆ. ಇದರಲ್ಲಿ ಅಮೆರಿಕದ 14 ಯುದ್ಧ ವಿಮಾನಗಳ ಮೂಲಕ 5,100 ಮಂದಿ ಹಾಗೂ ಮೈತ್ರಿ ರಾಷ್ಟ್ರಗಳ 39 ವಿಮಾನಗಳ ಮೂಲಕ 2,400 ಜನರನ್ನು ಸ್ಥಳಾಂತರಿಸಲಾಗಿದೆ. ಈ ಮೊದಲೇ ಘೋಷಿಸಿರುವಂತೆ ಜನರನ್ನು ಸ್ಥಳಾಂತರಿಸುವ ಪ್ರಕ್ರಿಯೆ ಈ ತಿಂಗಳ ಅಂತ್ಯಕ್ಕೆ ಕೊನೆಗೊಳ್ಳಲಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ನಿನ್ನೆ ಪುನರುಚ್ಚರಿಸಿದ್ದರು.
ಇದನ್ನೂ ಓದಿ: ಕಾಬೂಲ್ ದಾಳಿ ಕ್ಷಮಿಸಲ್ಲ, ಮರೆಯುವುದೂ ಇಲ್ಲ, ಬೇಟೆಯಾಡಿ ಉತ್ತರ ಕೊಡುತ್ತೇವೆ: ಬೈಡನ್ ಶಪಥ