ವಾಷಿಂಗ್ಟನ್(ಅಮೆರಿಕ): ಅಫ್ಘಾನಿಸ್ತಾನವನ್ನು ತಾಲಿಬಾನ್ ಆಕ್ರಮಿಸಿಕೊಂಡ ನಂತರ ಸಾಕಷ್ಟು ಮಂದಿ ಅಮೆರಿಕಕ್ಕೆ ಸ್ಥಳಾಂತರ ಮಾಡಲ್ಪಟ್ಟಿದ್ದಾರೆ. ಮುಂದಿನ ವಾರ ಇನ್ನೂ ಹಲವು ರಾಷ್ಟ್ರಗಳಿಂದ ಸಾವಿರಾರು ಮಂದಿ ಬರುವ ನಿರೀಕ್ಷೆಯಿದೆ ಎಂದು ಅಮೆರಿಕ ಸೇನೆ ಹೇಳಿಕೊಂಡಿದೆ.
ವಿದೇಶಗಳಲ್ಲಿರುವ ಸುಮಾರು 14 ಸಾವಿರ ಮಂದಿ ಆಫ್ಘನ್ನರು ಅಮೆರಿಕಕ್ಕೆ ಬರುವ ಸಾಧ್ಯತೆ ಇದೆ. ಈಗಾಗಲೇ ಅಮೆರಿಕದ 8 ಮಿಲಿಟರಿ ಪ್ರದೇಶಗಳಲ್ಲಿ 53 ಸಾವಿರ ಮಂದಿಯಿದ್ದು, ವಿದೇಶಗಳಲ್ಲಿ ಇರುವವರೂ ಬಂದ ನಂತರ ಅವರ ಸಂಖ್ಯೆ 64 ಸಾವಿರ ಆಗುವ ನಿರೀಕ್ಷೆಯಿದೆ. ಮುಂದಿನ ವಾರ ವಿಮಾನಗಳು ಆರಂಭವಾಗಬಹುದು ಎಂದು ಅಮೆರಿಕ ಉತ್ತರ ಕಮಾಂಡ್ನ ಮುಖ್ಯ ಜನರಲ್ ವಾನ್ಹೆರ್ಕ್ ಹೇಳಿದ್ದಾರೆ.
ಸೇನಾ ನೆಲೆಗಳಲ್ಲಿ ಏಕೆ..?
ಅಮೆರಿಕಕ್ಕೆ ಸ್ಥಳಾಂತರ ಮಾಡಲ್ಪಟ್ಟವರನ್ನು ಮೊದಲಿಗೆ ಸೇನೆ ಸ್ಥಾಪಿಸಿರುವ ನೆಲೆಗಳಿಗೆ ಕರೆತರಲಾಗುತ್ತದೆ. ಅಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ಜೊತೆಗೆ ಹಲವು ಪರೀಕ್ಷೆಗಳನ್ನು ಮಾಡಿ ನಂತರ ನಾಗರಿಕ ಸ್ಥಳಗಳಿಗೆ ಕಳುಹಿಸಲಾಗುತ್ತದೆ.
ಈಗ ಸದ್ಯಕ್ಕೆ ಅಪ್ಘಾನಿಸ್ತಾನದಿಂದ ಸ್ಥಳಾಂತರ ಮಾಡಲ್ಪಟ್ಟ ಸುಮಾರು ನಾಲ್ಕು ಸಾವಿರ ಮಂದಿಯ ವೈದ್ಯಕೀಯ ಪರೀಕ್ಷೆಗಳು ಪೂರ್ಣಗೊಂಡಿವೆ. ಇದರಲ್ಲಿ 2,400 ಮಂದಿ ಆಫ್ಘನ್ನರೂ ಇದ್ದಾರೆ. ಅವರನ್ನು ಮನೆಗಳಿಗೆ ಕಳುಹಿಸಲಾಗಿದೆ ಎಂದು ವಾನ್ಹೆರ್ಕ್ ಮಾಹಿತಿ ನೀಡಿದ್ದಾರೆ.
ದಡಾರ ಭೀತಿ..
ಯೂರೋಪ್ ಮತ್ತು ಮದ್ಯಪ್ರಾಚ್ಯದಿಂದ ಬರುತ್ತಿರುವ ಆಫ್ಘನ್ ನಿರಾಶ್ರಿತರಲ್ಲಿ ದಡಾರ ಕಾಣಿಸಿಕೊಳ್ಳುತ್ತಿದೆ. ಇದೇ ಕಾರಣದಿಂದ ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ, ಅಮೆರಿಕ ಕಸ್ಟಮ್ಸ್ ಮತ್ತು ಗಡಿ ರಕ್ಷಣೆ ಕೇಂದ್ರದ ಶಿಫಾರಸಿನ ಮೇರೆಗೆ ವಿಮಾನ ಸಂಚಾರ ಸ್ಥಗಿತಗೊಳಿಸಲಾಗಿತ್ತು.
ದಡಾರ ಕಾಣಿಸಿಕೊಂಡವರಿಗೆ ವ್ಯಾಕ್ಸಿನ್ ನೀಡಲಾಗಿದ್ದು, 21 ದಿನಗಳು ಪೂರ್ಣಗೊಳ್ಳುತ್ತಿದೆ. 24 ಮಂದಿಯಲ್ಲಿ ದಡಾರ ಕಾಣಿಸಿಕೊಂಡಿದ್ದು, ಈಗ 12 ಮಂದಿಯಲ್ಲಿ ದಡಾರದ ಲಕ್ಷಣಗಳು ಹಾಗೆಯೇ ಉಳಿದುಕೊಂಡಿವೆ. ವ್ಯಾಕ್ಸಿನೇಷನ್ ಕಾಯುವಿಕೆ ಅವಧಿಯಾದ 21 ದಿನಗಳು ಪೂರ್ಣಗೊಂಡ ನಂತರ ವಿಮಾನಗಳು ಸಂಚಾರ ಆರಂಭಿಸುವ ನಿರೀಕ್ಷೆಯಿದೆ ಎಂದು ವಾನ್ ಹೆರ್ಕ್ ಸ್ಪಷ್ಟನೆ ನೀಡಿದ್ದಾರೆ.
ಕೋವಿಡ್ ವ್ಯಾಕ್ಸಿನೇಷನ್..
ಸ್ಥಳಾಂತರ ಮಾಡಲ್ಪಟ್ಟ ಶೇಕಡಾ 84ರಷ್ಟು ಮಂದಿಗೆ ಕೋವಿಡ್ ಲಸಿಕೆಯನ್ನು ಕನಿಷ್ಠ ಒಂದು ಡೋಸ್ ನೀಡಲಾಗಿದೆ. ಎರಡನೇ ಡೋಸ್ ಪಡೆಯಲು ಸಾಕಷ್ಟು ಸಮಯವಿದೆ. ಕೆಲವರು ಜಾನ್ಸನ್ ಆ್ಯಂಡ್ ಜಾನ್ಸನ್ ಲಸಿಕೆಯನ್ನೂ ಪಡೆದಿದ್ದಾರೆ ಎಂದು ವಾನ್ಹೆರ್ಕ್ ಸ್ಪಷ್ಟಪಡಿಸಿದ್ದಾರೆ.