ನವದೆಹಲಿ: ಡೊಮಿನಿಕಾದಲ್ಲಿ ಅರೆಸ್ಟ್ ಆಗಿರುವ ಭಾರತೀಯ ಉದ್ಯಮಿ ಮೆಹುಲ್ ಚೋಕ್ಸಿ ಗಾಯಗೊಂಡು ಪೊಲೀಸ್ ಕಸ್ಟಡಿಯಲ್ಲಿ ಕಂಬಿ ಹಿಂದೆ ನಿಂತಿರುವ ಫೋಟೋಗಳನ್ನು ಆಂಟಿಗುವಾ ನ್ಯೂಸ್ ರೂಮ್ ಒದಗಿಸಿದೆ.
ಈ ಫೋಟೋಗಳಲ್ಲಿ ನಾವು ಮೆಹುಲ್ ಚೋಕ್ಸಿಯ ಎಡಗಣ್ಣಿಗೆ, ಕೈಗಳಿಗೆ ಗಾಯಗಳಾಗಿರುವುದನ್ನು ಕಾಣಬಹುದಾಗಿದೆ. ಮೇ 28 ರಂದು ಚೋಕ್ಸಿ ಪರ ಡೊಮಿನಿಕಾ ಮೂಲದ ವಕೀಲ ವೇಯ್ನ್ ಮಾರ್ಷ್ ಅವರು ಎಎನ್‌ಐ ಸುದ್ದಿಸಂಸ್ಥೆಗೆ ನೀಡಿದ್ದ ಸಂದರ್ಶನದಲ್ಲಿ ನನ್ನ ಕಕ್ಷಿದಾರ ಮೆಹುಲ್ ಚೋಕ್ಸಿ ಅವರನ್ನು ಆಂಟಿಗುವಾದಿಂದ ಅಪಹರಿಸಿ ಥಳಿಸಿದ್ದಾರೆ ಎಂದು ಆರೋಪಿಸಿದ್ದರು.
ಚೋಕ್ಸಿಗೆ ಬಲವಾಗಿ ಹೊಡೆಯಲಾಗಿದೆ. ಅವರ ಕಣ್ಣುಗಳಿಗೆ ಗಾಯವಾಗಿದೆ. ಅವರ ದೇಹದ ಮೇಲೆ ಹಲವಾರು ಸುಟ್ಟ ಗಾಯದ ಗುರುತುಗಳಿವೆ. ಮೇ 23ರಂದು ಆಂಟಿಗುವಾದ ಜಾಲಿ ಹಾರ್ಬರ್‌ನಲ್ಲಿ ಕೆಲ ವ್ಯಕ್ತಿಗಳು ಹಡಗಿನ ಮೂಲಕ ಡೊಮಿನಿಕಾಗೆ ಕರೆತಂದಿದ್ದರು. ಚೋಕ್ಸಿ ಇವರನ್ನು ಭಾರತೀಯ ಮೂಲದ ವ್ಯಕ್ತಿಗಳು ಮತ್ತು ಆಂಟಿಗುವಾನ್ ಪೊಲೀಸರು ಎಂದು ನಂಬಿದ್ದರು ಎಂದು ಮಾರ್ಷ್ ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತಕ್ಕೆ ಮೆಹುಲ್ ಚೋಕ್ಸಿ ಹಸ್ತಾಂತರಕ್ಕೆ ತಡೆ ನೀಡಿದ ಡೊಮಿನಿಕಾ ಕೋರ್ಟ್
ಪ್ರಕರಣ ಹಿನ್ನೆಲೆ
ಭಾರತೀಯ ಮೂಲದ ವಜ್ರೋದ್ಯಮಿಯಾಗಿರುವ ಮೆಹುಲ್ ಚೋಕ್ಸಿ, ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ)ಗೆ 3,500 ಕೋಟಿ ರೂ. ವಂಚಿಸಿ ಪರಾರಿಯಾಗಿ ಆಂಟಿಗುವಾ-ಬಾರ್ಬುಡಾದಲ್ಲಿ ತಲೆಮರೆಸಿಕೊಂಡಿದ್ದರು. ಆದರೆ ಆಂಟಿಗುವಾದಿಂದಲೂ ನಾಪತ್ತೆಯಾಗಿದ್ದ ಚೋಕ್ಸಿಯನ್ನು ಡೊಮಿನಿಕಾದಲ್ಲಿ ಪೊಲೀಸರು ಬಂಧಿಸಿದ್ದರು. ಡೊಮಿನಿಕಾ ನ್ಯಾಯಾಲಯದಲ್ಲಿ ಚೋಕ್ಸಿ ಅವರು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದು, ಇವರನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಗೆ ಕೋರ್ಟ್ ತಡೆಯೊಡ್ಡಿದೆ. ಜೂನ್ 2 ರಂದು ಈ ಬಗ್ಗೆ ವಿಚಾರಣೆ ನಡೆಯಲಿದೆ. ಪ್ರಸ್ತುತ ಚೋಕ್ಸಿ ಡೊಮಿನಿಕಾ ಪೊಲೀಸ್ ಕಸ್ಟಡಿಯಲ್ಲಿದ್ದಾರೆಂದು ಮೂಲಗಳು ತಿಳಿಸಿವೆ.
ಡೊಮಿನಿಕಾ ವಿರೋಧ ಪಕ್ಷಕ್ಕೆ ಚೋಕ್ಸಿ ನೆರವು?
ವಂಚಕ ಉದ್ಯಮಿ ಮೆಹುಲ್ ಚೋಕ್ಸಿಯು ಡೊಮಿನಿಕಾದ ಪ್ರತಿಪಕ್ಷವಾದ ಯುನೈಟೆಡ್ ಪ್ರೋಗ್ರೆಸ್ಸಿವ್ ಪಾರ್ಟಿಗೆ ಧನಸಹಾಯ ನೀಡುತ್ತಿದ್ದರು. ಇದಕ್ಕಾಗಿಯೇ ವಿರೋಧ ಪಕ್ಷವು ಮೆಹುಲ್ ಚೋಕ್ಸಿಯನ್ನು ಬೆಂಬಲಿಸಿ ಹೇಳಿಕೆ ನೀಡಿದ್ದವು ಎಂದು ಡೊಮಿನಿಕಾ ಪ್ರಧಾನಿ ಗ್ಯಾಸ್ಟನ್ ಬ್ರೌನ್ ಗಂಭೀರ ಆರೋಪ ಮಾಡಿದ್ದಾರೆ.