ವಾಷಿಂಗ್ಟನ್ (ಯುಎಸ್): ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮಂಗಳವಾರದಂದು ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಅವರೊಂದಿಗೆ, ಹವಾಮಾನ ಬದಲಾವಣೆ, ಚೀನಾ ಮತ್ತು ಮ್ಯಾನ್ಮಾರ್ ಸೇರಿದಂತೆ ಜಾಗತಿಕ ಮತ್ತು ಪ್ರಾದೇಶಿಕ ಸವಾಲುಗಳ ಸಹಕಾರ ಕುರಿತು ಚರ್ಚಿಸಿದರು. ಎರಡೂ ನಾಯಕರು ಅಮೆರಿಕ ಆಸ್ಟ್ರೇಲಿಯಾ ಮೈತ್ರಿಕೂಟದ ಬಲವನ್ನು ಪುನರುಚ್ಚರಿಸಿದ್ದಾರೆ ಎಂದು ಶ್ವೇತಭವನದ ಹೇಳಿಕೆ ತಿಳಿಸಿದೆ.
"ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ಪ್ರಧಾನಿ ಸ್ಕಾಟ್ ಹವಾಮಾನ ಬದಲಾವಣೆ, ಚೀನಾ, ಬರ್ಮಾ ಮತ್ತು ಇತರ ಪ್ರಾದೇಶಿಕ ವಿಷಯಗಳೂ ಸೇರಿದಂತೆ ಜಾಗತಿಕ ಮತ್ತು ಪ್ರಾದೇಶಿಕ ಸವಾಲುಗಳ ಕುರಿತು ಹೆಚ್ಚಿನ ಸಹಕಾರದ ಅವಕಾಶಗಳ ಬಗ್ಗೆ ಚರ್ಚಿಸಿದರು" ಎಂದು ಶ್ವೇತಭವನದ ಮೂಲಗಳು ಮಾಹಿತಿ ನೀಡಿವೆ. ಇನ್ನು ಇಂಡೋ - ಪೆಸಿಫಿಕ್ ಪ್ರದೇಶದಲ್ಲಿ ಮತ್ತಷ್ಟು ಸಹಕಾರ ನೀಡುವುದಾಗಿ ವಾಗ್ದಾನ ಮಾಡಿದರು.
"ಸಾಂಕ್ರಾಮಿಕ ರೋಗದಿಂದ ಆರ್ಥಿಕ ಚೇತರಿಕೆ ಉತ್ತೇಜಿಸಲು ಮತ್ತು ಜಾಗತಿಕವಾಗಿ ಪ್ರಜಾಪ್ರಭುತ್ವ ಮೌಲ್ಯಗಳನ್ನು ಮುನ್ನಡೆಸಲು ಇತರ ಮಿತ್ರರಾಷ್ಟ್ರಗಳು ಮತ್ತು ಪಾಲುದಾರರೊಂದಿಗೆ ಒಟ್ಟಾಗಿ ಕೆಲಸ ಮಾಡುವ ಪ್ರಾಮುಖ್ಯತೆಯ ಬಗ್ಗೆ ಅವರು ಒಪ್ಪಿಕೊಂಡರು.
ಈ ತಿಂಗಳ ಆರಂಭದಲ್ಲಿ, ಕಮಲಾ ಹ್ಯಾರಿಸ್ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಚರ್ಚಿಸಿದ್ದರು.