ಉತ್ತರ ಕೆರೊಲಿನಾ(ಅಮೆರಿಕಾ): ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಡೆಮೋಕ್ರಾಟಿಕ್ ಪಕ್ಷದಿಂದ ಉಪಾಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನಗೊಂಡಿರುವ ಕಮಲಾ ಹ್ಯಾರಿಸ್ ಅವರ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಜನರು ಅವರನ್ನು ಇಷ್ಟ ಪಡುವುದಿಲ್ಲ ಮತ್ತು ಅವರು ಅಧ್ಯಕ್ಷರಾದರೆ ಅದು ಅಮೆರಿಕಾಗೆ 'ಅವಮಾನ' ಆದಂತೆ ಎಂದು ಹೇಳಿದ್ದಾರೆ.
'ಬಿಡೆನ್ ಗೆಲುವು, ಚೀನಾ ಗೆಲುವು ಎರಡರಲ್ಲೂ ಯಾವುದೇ ವ್ಯತ್ಯಾಸವಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳುವುದು ತುಂಬಾ ಸರಳವಾಗಿದೆ. ವಿಶ್ವದ ಇತಿಹಾಸದಲ್ಲಿ ಶ್ರೇಷ್ಠ ಆರ್ಥಿಕತೆಯನ್ನು ನಿರ್ಮಿಸುವ ಪರಿಸ್ಥಿತಿ ನಿಮ್ಮಲ್ಲಿದೆ' ಎಂದು ಉತ್ತರ ಕೆರೊಲಿನಾದಲ್ಲಿ ನಡೆದ ರ‍್ಯಾಲಿಯಲ್ಲಿ ಟ್ರಂಪ್ ಹೇಳಿದರು.
'ಜನರು ಅವರನ್ನು ಇಷ್ಟ ಪಡುವುದಿಲ್ಲ (ಕಮಲಾ ಹ್ಯಾರಿಸ್), ಯಾರೂ ಅವರನ್ನು ಇಷ್ಟ ಪಡುವುದಿಲ್ಲ. ಅವರು ಎಂದಿಗೂ ಅಮೆರಿಕಾದ ಮೊದಲ ಮಹಿಳಾ ಅಧ್ಯಕ್ಷರಾಗಲು ಸಾಧ್ಯವಿಲ್ಲ'. ಹಾಗೇನಾದರು ಆದರೆ ಇದು ನಮ್ಮ ದೇಶಕ್ಕೆ ಮಾಡಿದ ಅವಮಾನವಾಗಲಿದೆ ಎಂದು ಹೇಳಿದ್ದಾರೆ.
ಚೀನಾ ಮತ್ತು ದಂಗೆಕೋರರು ಬಿಡೆನ್ ಗೆಲ್ಲಲು ಏಕೆ ಬಯಸುತ್ತಾರೆ ಎಂಬುದು ಸ್ಪಷ್ಟವಾಗಿದೆ. ಏಕೆಂದರೆ ಬಿಡೆನ್ ಅವರ ನೀತಿಗಳು ಅಮೆರಿಕಾದ ಅವನತಿ ಎಂದು ಅವರಿಗೆ ತಿಳಿದಿದೆ ಎಂದು ಆರೋಪಿಸಿದ್ದಾರೆ.
ಕಮಲಾ ಹ್ಯಾರಿಸ್ ಅವರ ಮೇಲೆ ಮತ್ತಷ್ಟು ದಾಳಿ ನಡೆಸಿದ ಟ್ರಂಪ್, ರೇಸ್ನಿಂದ ಹೊರ ಬಂದ ನಂತರವೂ ಮುಂಬರುವ ಚುನಾವಣೆಗಾಗಿ ಬಿಡೆನ್, ಕಮಲಾ ಅವರನ್ನು ತನ್ನ ರೇಸ್ನ ಸಂಗಾತಿಯಾಗಿ ಆಯ್ಕೆ ಮಾಡಿರುವುದು ಕುತೂಹಲಕಾರಿಯಾಗಿದೆ ಎಂದು ಹೇಳಿದ್ದಾರೆ.