ಲಾಸ್ ಏಂಜಲೀಸ್(ಅಮೆರಿಕ): ನಟ-ಹಾಸ್ಯಗಾರ ಕಲ್ ಪೆನ್ ಅವರು ಅಚ್ಚರಿಯ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ತಾನು ಸಲಿಂಗಿ ಎಂದು ತಿಳಿಸಿದ್ದು, ತಮ್ಮ 11 ವರ್ಷಗಳ ಜೊತೆಗಾರ ಜೋಶ್ ಅವರೊಂದಿಗೆ ವಿವಾಹವಾಗುವುದಾಗಿ ಹೇಳಿಕೊಂಡಿದ್ದಾರೆೆ.
ಹಾಲಿವುಡ್‌ನ ಅತ್ಯಂತ ಪ್ರಮುಖ ಭಾರತೀಯ-ಅಮೆರಿಕನ್ ನಟರಲ್ಲಿ ಒಬ್ಬರಾಗಿರುವ ಪೆನ್, ಸಿಬಿಎಸ್ ಸಂಡೇ ಮಾರ್ನಿಂಗ್ ಕಾರ್ಯಕ್ರಮಕ್ಕೆ ನೀಡಿದ ಸಂದರ್ಶನದಲ್ಲಿ ಈ ವಿಚಾರ ಬಹಿರಂಗಪಡಿಸಿದ್ದಾರೆ. ಜೋಶ್ ಮತ್ತು ನಾನು 11 ವರ್ಷಗಳಿಂದ ಒಟ್ಟಿಗೆ ಇದ್ದೇವೆ. ಅಕ್ಟೋಬರ್‌ನಲ್ಲಿ ನಾವು ನಮ್ಮ 11ನೇ ವಾರ್ಷಿಕೋತ್ಸವವನ್ನು ಆಚರಿಸಲಿದ್ದೇವೆ ಎಂದಿದ್ದಾರೆ.
ಪೆನ್ ಅವರ ನಿಜವಾದ ಹೆಸರು ಕಲ್ಪೆನ್ ಸುರೇಶ್ ಮೋದಿ. 2004ರ ಹಾಸ್ಯಮಯ "ಹೆರಾಲ್ಡ್ ಮತ್ತು ಕುಮಾರ್ ಗೋ ಟು ವೈಟ್ ಕ್ಯಾಸಲ್"ನಿಂದ ಹೆಚ್ಚು ಪರಿಚಿತರಾದ ಇವರು, ಈವರೆಗೂ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. 2006ರ ಫಾಕ್ಸ್ ಸರಣಿ "ಹೌಸ್" ಮತ್ತು "ಡಿಸಿಗ್ನೇಡ್ ಸರ್ವೈವರ್", ಎಬಿಸಿ ಶೋನಲ್ಲಿಯೂ ನಟಿಸಿದ್ದಾರೆ.
ಬರಾಕ್ ಒಬಾಮಾ ಪರ ಪ್ರಚಾರಕ್ಕೆ ನಟನೆಗೆ ಬ್ರೇಕ್ : ಈ ನಟ 2012ರಲ್ಲಿ ಬರಾಕ್ ಒಬಾಮಾ ಪರ ಪ್ರಚಾರಕ್ಕಾಗಿ ನಟನೆಯಿಂದ ವಿರಾಮ ಪಡೆದಿದ್ದರು. ಅವರು ಕಚೇರಿಯಲ್ಲಿ ಆಡಳಿತ ವಿಭಾಗದಲ್ಲಿ ಕೆಲಸ ಮಾಡಿಕೊಂಡಿದ್ದರು. ವಾಷಿಂಗ್ಟನ್ ಡಿಸಿಯಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಪೆನ್ ತನ್ನ ನಿಶ್ಚಿತ ವರನನ್ನು ಭೇಟಿಯಾದರು.
ಇತರ ಅನೇಕ ಜನರಿಗೆ ಹೋಲಿಸಿದರೆ, ನನ್ನ ಸ್ವಂತ ಲೈಂಗಿಕತೆಯನ್ನು ತಡವಾಗಿ ಕಂಡುಕೊಂಡಿದ್ದೇನೆ ಎಂದು ನಟ ಹೇಳಿದ್ದಾರೆ. ಈ ವಿಷಯದ ಬಗ್ಗೆ ನನಗೆ ಯಾವುದೇ ಟೈಮ್‌ಲೈನ್ ಇಲ್ಲ. ಜನರು ತಮ್ಮ ಜೀವನದಲ್ಲಿ ವಿಭಿನ್ನ ಸಮಯಗಳಲ್ಲಿ ತಮ್ಮತನವನ್ನು ಲೆಕ್ಕಾಚಾರ ಮಾಡುತ್ತಾರೆ. ಹಾಗಾಗಿ, ನಾನೂ ಅದನ್ನು ಮಾಡಿದ್ದೇನೆ ಎಂದು ಖುಷಿಯಾಗಿದೆ ಎಂದು ಪೀಪಲ್ ಮ್ಯಾಗಜೀನ್‌ಗೆ ತಿಳಿಸಿದರು.
ನಾನು ಓದುಗರೊಂದಿಗೆ ನಮ್ಮ ಸಂಬಂಧವನ್ನು ಹಂಚಿಕೊಳ್ಳಲು ನಿಜವಾಗಿಯೂ ಉತ್ಸುಕನಾಗಿದ್ದೇನೆ ಎಂದಿರುವ ಅವರು, ನಿಸ್ಸಂಶಯವಾಗಿ ನಾನು ಒಬ್ಬ ಪುರುಷನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದೇನೆ. ನಮ್ಮ ಕುಟುಂಬಗಳು ಮದುವೆಯಲ್ಲಿ ಇರುತ್ತವೆ. ಈಗ ದೊಡ್ಡ ವಿಷಯ ಎಂದರೆ ಅದು ಅದ್ಧೂರಿ ಮದುವೆಯೋ ಅಥವಾ ಚಿಕ್ಕ ಮದುವೆಯೋ ಎಂಬುದು. ನನಗೆ ಭಾರತೀಯ ಮದುವೆ ಸಂಪ್ರದಾಯ ಇಷ್ಟ ಎಂದು ತಮ್ಮ ಅಭಿಪ್ರಾಯ ಹೊರ ಹಾಕಿದ್ದಾರೆ.