ವಾಷಿಂಗ್ಟನ್ ಡಿಸಿ: ಕಾಬೂಲ್ ವಿಮಾನ ನಿಲ್ದಾಣದ ಹೊರಗಡೆ ಗುರುವಾರ ಸಂಭವಿಸಿದ ಅವಳಿ ಆತ್ಮಾಹುತಿ ದಾಳಿಯಲ್ಲಿ ಅಮೆರಿಕದ 12 ಸೇನಾ ಸಿಬ್ಬಂದಿ ಸಾವನ್ನಪ್ಪಿ, 15 ಸಿಬ್ಬಂದಿ ಗಾಯಗೊಂಡಿದ್ದಾರೆ. ಈ ದಾಳಿಯನ್ನು ಕಟುವಾಗಿ ಖಂಡಿಸಿರುವ ಅಮೆರಿಕಾ, ಇದಕ್ಕೆ ಕಾರಣವಾದ ಸಂಘಟನೆಗಳನ್ನು ಸುಮ್ಮನೆ ಬಿಡಲ್ಲ ಎಂದು ಶಪಥ ಮಾಡಿದೆ.
ಬಾಂಬ್ ದಾಳಿ ಮಾಡಿ ಅಮೆರಿಕನ್ನರ ಸಾವಿಗೆ ಕಾರಣವಾದ ಸಂಘಟನೆಯ ವಿರುದ್ಧ ದಾಳಿ ಮಾಡುತ್ತೇವೆ. ನಾವು ಇದನ್ನು ಕ್ಷಮಿಸಲ್ಲ. ಜೊತೆಗೆ ಇದನ್ನು ಮರೆಯುವುದೂ ಇಲ್ಲ. ನಿಮ್ಮನ್ನು ಬೇಟೆಯಾಡಿ ತಕ್ಕ ಪ್ರತ್ಯುತ್ತರ ನೀಡುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಶಪಥ ಮಾಡಿದ್ದಾರೆ.
ಈ ದಾಳಿ ಕಾರಣರಾದ ಐಸಿಸ್ ನಾಯಕರ ಬಗ್ಗೆ ನಮಗೆ ಗೊತ್ತು. ಬೃಹತ್ ಮಿಲಿಟರಿ ಕಾರ್ಯಾಚರಣೆ ಇಲ್ಲದೆ ನಮ್ಮದೇ ರೀತಿಯಲ್ಲಿ ಅವರು ಎಲ್ಲೇ ಇದ್ದರೂ ಹುಡುಕಿ ಹೊಡೆಯುತ್ತೇವೆ ಎಂದು ಬೈಡನ್ ತಿಳಿಸಿದ್ದಾರೆ.
ನಾವು ಈ ಮಿಷನ್ ಪೂರ್ಣಗೊಳಿಸುತ್ತೇವೆ. ಉಗ್ರರಿಗೆ ನಾವು ಹೆದರಲ್ಲ, ನಮ್ಮ ಮಿಷನ್ ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ. ಅಫ್ಘನ್ನಿಂದ ಜನರ ಸ್ಥಳಾಂತರ ಮುಂದುವರಿಯಲಿದೆ. ಇದನ್ನು ಯಾರಿಂದಲೂ ತಡೆಯಲು ಆಗಲ್ಲ ಎಂದು ಬೈಡಲ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕಾಬೂಲ್ ವಿಮಾನ ನಿಲ್ದಾಣದ ಹೊರಗಡೆ ಗುರುವಾರ ಸಂಭವಿಸಿದ ಅವಳಿ ಆತ್ಮಾಹುತಿ ದಾಳಿಯಲ್ಲಿ ಕನಿಷ್ಠ 60 ಜನ ಪ್ರಾಣ ಕಳೆದುಕೊಂಡಿದ್ದಾರೆ. ಭೀಕರ ದಾಳಿ ಮಾಡಿದ್ದು ತಾವೇ ಎಂದು ಉಗ್ರ ಸಂಘಟನೆ ಐಸಿಸ್-ಕೆ ಒಪ್ಪಿಕೊಂಡಿದೆ. ದಾಳಿಯಲ್ಲಿ ಯುಎಸ್ನ 12 ಸೇನಾ ಸಿಬ್ಬಂದಿ ಮೃತಪಟ್ಟಿದ್ದು, 15 ಸಿಬ್ಬಂದಿ ಗಾಯಗೊಂಡಿದ್ದಾರೆ.
(ಕಾಬೂಲ್ ಬ್ಲಾಸ್ಟ್: ಅಮೆರಿಕ ಸೈನಿಕರು ಸೇರಿ 60 ಜನ ಹತ, ದಾಳಿಯ ಹೊಣೆ ಹೊತ್ತ ISIS-K)