ಜಿನೇವಾ/ನವದೆಹಲಿ: ತನ್ನಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಹೆಚ್ಚಿನ ಸುಂಕ ವಿಧಿಸುತ್ತಿದೆ ಎಂದು ಆಪಾದಿಸಿ ವಿಶ್ವ ವಾಣಿಜ್ಯ ಸಂಸ್ಥೆಗೆ(WTO)ಗೆ ಜಪಾನ್ ದೂರು ನೀಡಿದೆ.
ಮೊಬೈಲ್ ಫೋನ್, ಬೇಸ್ ಸ್ಟೇಷನ್ ಮತ್ತು ರೂಟರ್ಸ್, ಸರ್ಕ್ಯೂಟ್ ಬೋರ್ಡ್ ಸೇರಿದಂತೆ ಇತರೆ ಉತ್ಪನ್ನಗಳ ಮೇಲೆ ಭಾರತ ಹೆಚ್ಚುವರಿ ಆಮದು ಸುಂಕ ಹೇರುತ್ತಿದೆ ಜಪಾನ್ ಆಪಾದಿಸಿದೆ.
'ಭಾರತ ಸುಂಕದ ರಾಜ್ಯ'ವೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪದೇ ಪದೇ ಜರೆಯುತ್ತಿರುತ್ತಾರೆ. ಟ್ರಂಪ್ಗಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ಜಪಾನ್, ಕಾನೂನಿನ ಮೂಲಕ ಡಬ್ಲ್ಯುಟಿಒಗೆ ದೂರು ಕೊಟ್ಟಿದೆ.
ಸೀಮಾ ಸುಂಕ ಸೇರಿದಂತೆ ಕೆಲವು ವಿಧದ ತೆರಿಗೆಗಳನ್ನು ಹೆಚ್ಚಿಸಲಾಗಿದೆ. ದೇಶಿ ಉತ್ಪಾದನೆಯನ್ನು ಉತ್ತೇಜಿಸಲು ಈ ಕ್ರಮ ಅಗತ್ಯವಾಗಿತ್ತು ಎಂದು ಭಾರತ ಸ್ಪಷ್ಟನೆ ನೀಡಿದೆ. 2014ರ ಸೆಪ್ಟೆಂಬರ್ನಲ್ಲಿ ಘೋಷಣೆಯಾದ 'ಮೇಕ್ ಇನ್ ಇಂಡಿಯಾ'ಗೆ ಅತ್ಯಧಿಕ ಪ್ರೋತ್ಸಾಹ ಒದಗಿಸಲು ಸುಂಕ ಏರಿಕೆ ಭಾರತಕ್ಕೆ ಅನಿವಾರ್ಯವಾಗಿದೆ.