ನ್ಯೂಯಾರ್ಕ್: ಕೊರೊನಾ ವೈರಸ್ ಹುಟ್ಟಿದ್ದು , ಚೀನಾದ ವುಹಾನ್ನಲ್ಲಿ ಎಂಬುದು ಗೊತ್ತಿರುವ ವಿಷಯ. ಕೊರೊನಾ ವೈರಸ್ ಚೀನಾ ವೈರಸ್ ಎಂದು ಕರೆಯುವ ಮೂಲಕ ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಲವಾರು ಬಾರಿ ಆಕ್ರೋಶ ವ್ಯಕ್ತಪಡಿದ್ದು ಜಗಜ್ಜಾಹೀರು. ಆದರೆ, ಈಗ ಕೊರೊನಾ ವೈರಸ್ ಪೀಡಿತರ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ ಕೊರೊನಾ ಚಿಕಿತ್ಸೆಗೆ ಬೇಕಾದ ಉಪಕರಣಗಳನ್ನು ಚೀನಾದಿಂದಲೇ ತರಿಸಿಕೊಳ್ಳಲು ಅಮೆರಿಕ ಮುಂದಾಗಿರುವುದು ವಿಪರ್ಯಾಸವಲ್ಲದೇ ಮತ್ತೇನು?
ನ್ಯೂಯಾರ್ಕ್ ಗವರ್ನರ್ ಆ್ಯಂಡ್ರ್ಯೂಕೊಮೊ ಅವರೇ ಈ ವಿಷಯ ತಿಳಿಸಿದ್ದು, ಅಮೆರಿಕದ ಬಹುತೇಕ ಕಂಪನಿಗಳು ಚೀನಾ ನಿರ್ಮಿತ ವೈದ್ಯಕೀಯ ಉಪಕರಣಗಳನ್ನು ತರಿಸಿಕೊಳ್ಳಲು ಮುಂದಾಗಿರುವುದನ್ನು ಖಚಿತಪಡಿಸಿದ್ದಾರೆ. ಅಮೆರಿಕದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಅವರ ಚಿಕಿತ್ಸೆಗಾಗಿ ಬೇಕಾದ ವೈದ್ಯಕೀಯ ಉಪಕರಣಗಳಿಗಾಗಿ ದೇಶದೊಳಗಿನ ರಾಜ್ಯಗಳು ತಮ್ಮಲ್ಲಿಯೇ ಬಡಿದಾಡಿಕೊಳ್ಳುತ್ತಿವೆ. ಹೀಗಾಗಿ ಚೀನಾದಿಂದಲೇ ಉಪಕರಣಗಳನ್ನು ತರಿಸಿಕೊಳ್ಳುವತ್ತ ಅಮೆರಿಕ ಚಿಂತಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗವರ್ನರ್ ಆ್ಯಂಡ್ರ್ಯೂಕೊಮೊ, "ನ್ಯೂಯಾರ್ಕ್ನಲ್ಲಿ ಒಟ್ಟು 66,000 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಈಗಾಗಲೇ 1,218 ಜನ ಮೃತ ಪಟ್ಟಿದ್ದಾರೆ. ಇದು ನಮಗಾಗಿರುವ ಬಹಳ ದೊಡ್ಡ ಹಾನಿ ಹಾಗೂ ಅತ್ಯಂತ ದುಃಖದ ವಿಷಯ" ಎಂದಿದ್ದಾರೆ.
"ವೈದ್ಯಕೀಯ ಸಲಕರಣೆಗಳಿಗಾಗಿ ನಾವು ಕಾತುರದಿಂದ ಎದುರು ನೋಡುತ್ತಿದ್ದೇವೆ. ದೇಶದಲ್ಲಿನ 50 ರಾಜ್ಯಗಳು ಅದಕ್ಕಾಗಿಯೇ ಕಾಯುತ್ತಿವೆ. ಫೆಡರಲ್ ಸರ್ಕಾರ ಸಹ ಇದಕ್ಕಾಗಿ ಶ್ರಮಿಸುತ್ತಿದೆ. ಖಾಸಗಿ ಆಸ್ಪತ್ರೆಗಳಿಗೂ ಸಲಕರಣೆಗಳು ಬೇಕಿವೆ. ಈಗಿನ ಪರಿಸ್ಥಿತಿಯಲ್ಲಿ ನೂರಾರು ಸಂಸ್ಥೆಗಳಿಗೆ ಒಂದೇ ರೀತಿಯ ನಿರ್ದಿಷ್ಟ ಸಲಕರಣೆಗಳು ಬೇಕಿವೆ. ಹೀಗಾಗಿ ಎಲ್ಲರೂ ಅವನ್ನು ಕೊಳ್ಳಲು ಚೀನಾದತ್ತ ಮುಖ ಮಾಡಿದ್ದೇವೆ. ಹೌದು.. ನಮ್ಮಲ್ಲೇ ನಾವು ಜಗಳವಾಡುತ್ತಿದ್ದೇವೆ. ನಮಗೆ ನಾವೇ ಪ್ರತಿಸ್ಪರ್ಧಿಗಳಾಗಿದ್ದೇವೆ." ಎಂದು ಮಾರ್ಮಿಕವಾಗಿ ಅವರು ಹೇಳಿದರು.
ಅಲ್ಲಿಗೆ ದೊಡ್ಡಣ್ಣ ಅಮೆರಿಕ ಸಹ ಕೊರೊನಾ ಎದುರು ಹೋರಾಟ ಮಾಡಲು ಹೆಣಗಾಡುತ್ತಿದ್ದು, ಕೊನೆಗೆ ವೈದ್ಯಕೀಯ ಉಪಕರಣಗಳಿಗಾಗಿ ತನ್ನ ಎದುರಾಳಿ ರಾಷ್ಟ್ರ ಚೀನಾ ಮೊರೆ ಹೋಗುವ ಎಲ್ಲ ಸಾಧ್ಯತೆಗಳು ಕಂಡು ಬರುತ್ತಿವೆ.