ವಾಷಿಂಗ್ಟನ್ (ಯು.ಎಸ್.ಎ) : ಅಮೆರಿಕಾದ ಭಾರತದ ರಾಯಭಾರಿ ತಾರಂಜಿತ್ ಸಿಂಗ್ ಸಂಧು ಅವರು ಅಮೆರಿಕಾದ ಉನ್ನತ ಸಾರ್ವಜನಿಕ ಆರೋಗ್ಯ ತಜ್ಞ ಡಾ. ಆಂಥೋನಿ ಫೌಸಿ ಅವರೊಂದಿಗೆ ವರ್ಚುವಲ್ ಸಭೆ ನಡೆಸಿ ಭಾರತದಲ್ಲಿ ಪ್ರಸ್ತುತ ಕೋವಿಡ್-19 ಬಿಕ್ಕಟ್ಟು, ಹೊಸ ತಳಿಗಳು ಮತ್ತು ವೈರಸ್‌ನ ರೂಪಾಂತರಗಳ ವಿರುದ್ಧ ಲಸಿಕೆಗಳ ಪರಿಣಾಮಕಾರಿತ್ವದ ಬಗ್ಗೆ ಚರ್ಚಿಸಿದರು.
ಸಾಂಕ್ರಾಮಿಕ ರೋಗದ ಕುರಿತು ಅಮೆರಿಕಾ ಅಧ್ಯಕ್ಷ ಜೋ ಬೈಡನ್ರ ಉನ್ನತ ಸಲಹೆಗಾರರಾಗಿರುವ ಫೌಸಿಯೊಂದಿಗೆ ಭಾರತದ ಉನ್ನತ ಸರ್ಕಾರಿ ಅಧಿಕಾರಿಯೊಬ್ಬರು ಸಭೆ ನಡೆಸಿದ್ದು ಇದೇ ಮೊದಲಾಗಿದೆ. ಸಭೆಯಲ್ಲಿ ಫೌಸಿ ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತದೊಂದಿಗೆ ಇರುವುದಾಗಿ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.
ರಾಯಭಾರಿ ಸಂಧು ಅವರೊಂದಿಗಿನ ಮಾತುಕತೆಯ ಸಂದರ್ಭದಲ್ಲಿ, ಭಾರತದಲ್ಲಿನ ವೈರಸ್ ತಳಿಗಳು ಮತ್ತು ರೂಪಾಂತರಗಳು ಮತ್ತು ಇವುಗಳ ವಿರುದ್ಧ ಲಸಿಕೆಗಳ ಪರಿಣಾಮಕಾರಿತ್ವದ ಕುರಿತು ಕೂಡ ಚರ್ಚೆ ನಡೆಸಲಾಯಿತು.