ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ/ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತೀಯ ಅಮೆರಿಕನ್ನರು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ತಾವು ಹೊಂದಿರುವ ಸ್ನೇಹವನ್ನು ಉಲ್ಲೇಖಿಸಿ, 'ನವೆಂಬರ್ 3ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತೀಯ ಅಮೆರಿಕನ್ನರು ತನಗೆ ಮತ ಹಾಕುತ್ತಾರೆ' ಎಂದರು.
ನಮಗೆ ಭಾರತದಿಂದ ಉತ್ತಮವಾದ ಬೆಂಬಲವಿದೆ. ನಮಗೆ ಪ್ರಧಾನಿ ಮೋದಿ ಅವರ ದೊಡ್ಡ ಸಹಾಯವಿದೆ. ಭಾರತೀಯ (ಅಮೆರಿಕನ್) ಜನರು ಟ್ರಂಪ್‌ಗೆ ಮತ ಹಾಕುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಶ್ವೇತಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಳೆದ ತಿಂಗಳು ನಡೆದ ರಿಪಬ್ಲಿಕನ್ ರಾಷ್ಟ್ರೀಯ ಸಮಾವೇಶದ ಸಂದರ್ಭದಲ್ಲಿ ಟ್ರಂಪ್ ಅಭಿಯಾನ ಬಿಡುಗಡೆ ಆಗಿದ್ದು, 'ಇನ್ನೂ ನಾಲ್ಕು ವರ್ಷಗಳು' ಎಂಬ ವಿಡಿಯೋ ಬಗ್ಗೆ ಕೇಳಲಾದ ಪ್ರಶ್ನೆಗೆ ಟ್ರಂಪ್ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ. ಟ್ರಂಪ್ ವಿಕ್ಟರಿ ಫೈನಾನ್ಸ್ ಕಮಿಟಿಯ ರಾಷ್ಟ್ರೀಯ ಅಧ್ಯಕ್ಷ ಕಿಂಬರ್ಲಿ ಗಿಲ್ಫಾಯ್ಲ್ ಈ ವಿಡಿಯೋ ಟ್ವೀಟ್ ಮಾಡಿ ಹಂಚಿಕೊಂಡಿದ್ದಾರೆ.
ಮೋದಿ ಅವರೊಂದಿಗೆ ತನಗೆ ಉತ್ತಮ ಸಂಬಂಧವಿದೆ. ಮೋದಿ ನನ್ನ ಸ್ನೇಹಿತ ಮತ್ತು ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಒಳ್ಳೆಯ ಕೆಲಸಗಳು ಮಾಡುವುದು ಸುಲಭವಲ್ಲ ಎಂದು ಕಳೆದ ಸೆಪ್ಟೆಂಬರ್‌ನಲ್ಲಿ ಹ್ಯೂಸ್ಟನ್‌ನಲ್ಲಿ ನಡೆದ 'ಹೌಡಿ ಮೋಡಿ' ಕಾರ್ಯಕ್ರಮದಲ್ಲಿನ ತಮ್ಮ ಐತಿಹಾಸಿಕ ಭಾಷಣವನ್ನು ಈ ವೇಳೆ ನೆನಪಿಸಿಕೊಂಡರು.
ನಿಮಗೆ ತಿಳಿದಿರುವಂತೆ ನಾವು ಹ್ಯೂಸ್ಟನ್‌ನಲ್ಲಿ ಒಂದು ದೊಡ್ಡ ಸಮಾವೇಶ ನಡೆಸಿದ್ದೆವು. ಅದು ಅದ್ಭುತ ಘಟನೆಯಾಗಿದೆ. ನನ್ನನ್ನು ಪ್ರಧಾನಿ ಮೋದಿಯವರು ಆಹ್ವಾನಿಸಿದ್ದರು. ಅದು ಒಂದು ಉತ್ತಮ ಕ್ಷಣ ಮತ್ತು ಅದ್ಭುತವಾಗಿತ್ತು. ನಮಗೆ ಭಾರತದಿಂದ ವ್ಯಾಪಕ ಬೆಂಬಲವಿದೆ. ನಮಗೆ ಪ್ರಧಾನಿ ಮೋದಿ ಅವರ ದೊಡ್ಡ ಬೆಂಬಲವಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.