ವಾಷಿಂಗ್ಟನ್: ನವೆಂಬರ್ 3ರಂದು ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಅಭ್ಯರ್ಥಿ ಜೋ ಬಿಡೆನ್ ಹಾಗೂ ಉಪಾಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರನ್ನು ಬೆಂಬಲಿಸಲು ಇಂಡೋ ಅಮೆರಿಕನ್ನರು ಮುಂದಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಉದ್ಯಮಿಗಳಾದ ಅಜಯ್ ಮತ್ತು ವಿನಿತಾ ಭುಟೋರಿಯಾ ದಂಪತಿ ಗೆಟ್ ಔಟ್ ದ ವೋಟ್ (Get Out The Vote) ಎಂಬ ರ‍್ಯಾಲಿಯನ್ನು ಹಮ್ಮಿಕೊಂಡಿದ್ದು, ಡೆಮಾಕ್ರಟಿಕ್ ಪಕ್ಷದ ಪರವಾಗಿ ಮತ ಚಲಾಯಿಸುವಂತೆ ಮತ ಪ್ರಚಾರ ನಡೆಸಲಿದ್ದಾರೆ.
ಈ ಚುನಾವಣೆಯಲ್ಲಿ ಬಿಡೆನ್ ಮತ್ತು ಹ್ಯಾರಿಸ್ ಅವರಿಗೆ ಮತ ಚಲಾಯಿಸುವುದು ಬಹಳ ಮುಖ್ಯ. ಭಾರತೀಯ ಅಮೆರಿಕನ್ನರ ಪೀಳಿಗೆಗೆ ಮತ್ತು ನಮ್ಮ ಕನಸನ್ನು ಈಡೇರಿಸಲು ಇದು ಅನಿವಾರ್ಯ ಎಂದು ಹೋಟೆಲ್ ಉದ್ಯಮಿ ಅಶೋಕ್ ಭಟ್ ಹೇಳಿದ್ದಾರೆ.
ಕಮಲಾ ಹ್ಯಾರಿಸ್ ಅವರನ್ನು ದೇಶದ ಮೊದಲ ಉಪಾಧ್ಯಕ್ಷರನ್ನಾಗಿ ಮಾಡಿ ಇತಿಹಾಸ ನಿರ್ಮಿಸಬೇಕಿದೆ. ಅವರೆಲ್ಲರೂ ನಮಗೆ ಹೆಮ್ಮೆ ಎಂದು ಅಶೋಕ್ ಭಟ್ ಹೇಳಿದ್ದು, ಈ ರ‍್ಯಾಲಿಯಲ್ಲಿ ಶಿಕ್ಷಕರು, ವೈದ್ಯರು, ಉದ್ಯಮಿಗಳು, ಮುಖಂಡರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿಸ್ಕಾನ್ಸಿನ್, ಪೆನ್ಸಿಲ್ವೇನಿಯಾ, ಮಿಚಿಗನ್, ಫ್ಲೋರಿಡಾ ಮತ್ತು ನೆವಾಡಾ ರಾಜ್ಯಗಳಲ್ಲಿ 1.3 ಮಿಲಿಯನ್ ಭಾರತೀಯ ಅಮೆರಿಕನ್ನರು ಇದ್ದು, ಭಾರತೀಯರ ಮತಗಳು ಪಕ್ಷಗಳ ಗೆಲುವಿಗೆ ನಿರ್ಣಾಯಕ ಅಲ್ಲದಿದ್ದರೂ ಕೂಡಾ ಬಲ ತಂದುಕೊಡಬಹುದು ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ.