ನ್ಯೂಯಾರ್ಕ್: ಬುಧವಾರ ಪೋರ್ಟೊ ರಿಕೊದಲ್ಲಿ ನಡೆದ ವಿಶ್ವ ಸುಂದರಿ 2021 ಸ್ಪರ್ಧೆಯಲ್ಲಿ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದ 26 ವರ್ಷದ ಭಾರತೀಯ ಮೂಲದ ಅಮೆರಿಕದ ಶ್ರೀ ಸೈನಿ ಅವರ ಕಥೆ ನಿಜಕ್ಕೂ ಎಲ್ಲರಿಗೂ ಮಾದರಿಯಾಗಿದೆ.
ವಾಷಿಂಗ್ಟನ್‌ನ ಮೋಸೆಸ್ ಲೇಕ್‌ನಲ್ಲಿ ಬೆಳೆದ ಸೈನಿ ಲುಧಿಯಾನ ಮೂಲದವರು. 12ನೇ ವಯಸ್ಸಿನಿಂದ ಶಾಶ್ವತ ಪೇಸ್‌ಮೇಕರ್ ಅನ್ನು ಹೊಂದಿದ್ದಾರೆ ಮತ್ತು ಅಪರೂಪದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಇದೇ ಕಾರಣದಿಂದ ಅವರಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ಕೂಡಾ ಮಾಡಲಾಗಿದ್ದು, ಪೇಸ್ ಮೇಕರ್ ಅಳವಡಿಸಲಾಗಿದೆ.
ಶ್ರೀ ಸೈನಿ ಮಾರಣಾಂತಿಕ ಸಮಸ್ಯೆಗಳನ್ನ ಎದುರಿಸಿದ ಬಳಿಕ ಅವರ ಮುಖದ ಮೇಲೆ ಸುಟ್ಟಗಾಯಗಳಾಗಿದ್ದವು. ಆದರೆ, ಇದ್ಯಾವುದಕ್ಕೂ ಎದೆಗುಂದದ ಈ ಯುವತಿ ತನ್ನ ಎಲ್ಲ ಸಮಸ್ಯೆಗಳನ್ನ ಮೆಟ್ಟಿ ನಿಂತು ಹೆಚ್ಚು ಬಲಶಾಲಿಯಾಗಿ ಹೊರಹೊಮ್ಮಿದ್ದಾರೆ. ನಂತರ ತರಬೇತಿ ಪಡೆದು ನರ್ತಕಿ ಕೂಡಾ ಆಗಿ ಗಮನ ಸೆಳೆದಿದ್ದರು. ಚಿಕಾಗೋ ಮೂಲದ ಪ್ರತಿಷ್ಠಿತ ಜೋಫ್ರಿ ಬ್ಯಾಲೆಟ್ ಅವರಿಂದ ತರಬೇತಿ ಪಡೆದಿದ್ದಾರೆ.
ಮಿಸ್ ವರ್ಲ್ಡ್ ಈವೆಂಟ್‌ಗೆ ಹೋಗುವುದಕ್ಕೂ ಮುನ್ನ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಟೋಗಳನ್ನ ಪೋಸ್ಟ್ ಮಾಡಿರುವ ಶ್ರೀ ಸೈನಿ, 'ಮುಖದ ಸುಟ್ಟಗಾಯಗಳು ಮತ್ತು ಹೃದಯ ದೋಷವನ್ನು ನಿವಾರಿಸಿಕೊಂಡ ನನ್ನ ಕಥೆಯು ದೈನಂದಿನ ಜೀವನದಲ್ಲಿ ಸವಾಲುಗಳನ್ನು ಎದುರಿಸುತ್ತಿರುವರಿಗೆ ಪ್ರೋತ್ಸಾಹ ನೀಡುತ್ತದೆ ಎಂದು ನಾನು ಭಾವಿಸುತ್ತೇನೆ' ಅಂತಾ ಸಂದೇಶ ನೀಡಿದ್ದರು. ವಿಶ್ವ ಸುಂದರಿಯ ಈ ಪೋಸ್ಟ್ಗೆ ಅನೇಕರು ಪ್ರತಿಕ್ರಿಯೆ ನೀಡಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನು 2021ರ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಪೋಲೆಂಡ್‌ನ ಕರೋಲಿನಾ ಬಿಲಾವ್ಸ್ಕಾ ಅವರು ವಿಜೇತರಾಗಿದ್ದು, ಅವರನ್ನು ವಿಶ್ವ ಸುಂದರಿ 2021 ಎಂದು ಘೋಷಿಸಲಾಗಿದೆ.
ಇದನ್ನೂ ಓದಿ: ರಾಕೆಟ್ ದಾಳಿಗೆ ಖ್ಯಾತ ಉಕ್ರೇನಿಯನ್ ನಟಿ ಬಲಿ: ಮುಂದುವರಿದ ರಷ್ಯಾ ದಾಳಿ!