ನವದೆಹಲಿ: ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಭೂಮಿಯ ನಾಶ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಮುಂದಿನ ಪೀಳಿಗೆಗೆ ಆರೋಗ್ಯಕರ ಭೂಮಿ ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
‘ಮರಳುಗಾರಿಕೆ, ಭೂ ಕುಸಿತ ಮತ್ತು ಬರ’ ಕುರಿತ ಉನ್ನತ ಮಟ್ಟದ ಸಂವಾದದಲ್ಲಿ ಮಾತನಾಡಿದ ಅವರು, ಈಗಾಗಲೇ ಅವನತಿ ಹೊಂದಿರುವ 26 ದಶಲಕ್ಷ ಹೆಕ್ಟೇರ್ ಭೂಮಿಯನ್ನು 2030 ರ ವೇಳೆಗೆ ಪುನಃಸ್ಥಾಪಿಸುವ ಕೆಲಸವನ್ನು ಭಾರತ ಮಾಡುತ್ತಿದೆ ಎಂದರು.
ವಿಶ್ವಸಂಸ್ಥೆಯ ಕನ್ವೆನ್ಷನ್ ಟು ಕಾಂಬ್ಯಾಟ್ ಡೆ ಸರ್ಟಿಫಿಕೇಶನ್ (ಯುಎನ್‌ಸಿಸಿಡಿ) ಸಮ್ಮೇಳನದ 14 ನೇ ಅಧಿವೇಶನದ ಅಧ್ಯಕ್ಷರಾಗಿ ಪ್ರಧಾನ ಮಂತ್ರಿ ಮೋದಿ ಮಾತನಾಡಿದರು. ಭೂ ನಾಶವು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ವಿಶೇಷ ಸವಾಲನ್ನೊಡ್ಡುತ್ತಿದೆ.
ದಕ್ಷಿಣ ದೇಶಗಳ ಸಹಕಾರದಲ್ಲಿ, ಭೂ ಪುನಃಸ್ಥಾಪನೆ ಕಾರ್ಯತಂತ್ರಗಳನ್ನು ಅಭಿವೃದ್ಧಿಪಡಿಸಲು ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಭಾರತ ಸಹಾಯ ಮಾಡುತ್ತಿದೆ. ಭೂಮಿಯ ಬಗ್ಗೆ ವೈಜ್ಞಾನಿಕ ವಿಧಾನವನ್ನು ಉತ್ತೇಜಿಸಲು ಭಾರತದಲ್ಲಿ ಉನ್ನತ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ ಎಂದರು.
ಮಾನವನಿಂದ ಭೂಮಿಗೆ ಉಂಟಾಗುವ ಹಾನಿಯನ್ನು ತಡೆಯುವುದು ಮಾನವಕುಲದ ಸಾಮೂಹಿಕ ಜವಾಬ್ದಾರಿಯಾಗಿದೆ. ನಮ್ಮ ಭವಿಷ್ಯದ ಪೀಳಿಗೆಗೆ ಆರೋಗ್ಯಕರ ಭೂಮಿ ನೀಡಬೇಕಿರುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭೂ ನಾಶದ ಸಮಸ್ಯೆಗಳನ್ನು ಎತ್ತಿ ಹಿಡಿಯಬೇಕಿದೆ ಎಂದು ಇತರ ರಾಷ್ಟ್ರಗಳಿಗೆ ಕರೆ ಕೊಟ್ಟರು.
ಭೂ ಕುಸಿತ ತಪ್ಪಿಸಲು ನಾವು ಅಗತ್ಯ ಕ್ರಮ ಕೈಗೊಂಡಿದ್ದೇವೆ. ಈಗಾಗಲೇ ಅವನತಿ ಹೊಂದಿರುವ 26 ದಶಲಕ್ಷ ಹೆಕ್ಟೇರ್ ಭೂಮಿಯನ್ನು 2030 ರ ವೇಳೆಗೆ ಪುನಃಸ್ಥಾಪಿಸುವ ಉದ್ದೇಶ ಹೊಂದಿದ್ದೇವೆ. ಇದು 2.5 ರಿಂದ 3 ಬಿಲಿಯನ್ ಟನ್ ಇಂಗಾಲ ಹೆಚ್ಚಿಸುವ ಬದ್ಧತೆಗೆ ಸಹಕಾರಿಯಾಗಿದೆ. ಬನ್ನಿ ಪ್ರದೇಶದಂತಹ ಅನೇಕ ಭಾಗಗಳಲ್ಲಿ ಕೆಲವು ಹೊಸ ವಿಧಾನಗಳನ್ನು ಅಳವಡಿಸಿಕೊಂಡಿದೆ. ಅಲ್ಲಿ ಹುಲ್ಲುಗಾವಲುಗಳನ್ನು ಅಭಿವೃದ್ಧಿಪಡಿಸುವ ಮೂಲಕ ಭೂ ಪುನಃಸ್ಥಾಪನೆ ಮಾಡಲಾಗಿದೆ.
ಭೂ ಅವನತಿ ತಪ್ಪಿಸುವುದರಿಂದ ಮಣ್ಣಿನ ಆರೋಗ್ಯ, ಆಹಾರ ಸುರಕ್ಷತೆ ಜತೆಗೆ ಸುಧಾರಿತ ಜೀವನೋಪಾಯ ನಡೆಸಲು ಸಾಧ್ಯವಾಗುತ್ತದೆ. ಪ್ರತಿ ವರ್ಷ ಮರಳುಗಾರಿಕೆ ಹಾಗೂ ನೈಸರ್ಗಿಕ ವಿಕೋಪಗಳಿಂದ 12 ದಶಲಕ್ಷ ಹೆಕ್ಟೇರ್ಗಿಂತಲೂ ಹೆಚ್ಚು ಭೂಮಿ ನಾಶವಾಗುತ್ತಿದೆ. ವಿಶ್ವವು ವಾರ್ಷಿಕವಾಗಿ 24 ಬಿಲಿಯನ್ ಟನ್ ಫಲವತ್ತಾದ ಮಣ್ಣನ್ನು ಕಳೆದುಕೊಳ್ಳುತ್ತಿದೆ.
ಇದು ಆಹಾರ ಉತ್ಪಾದನೆ ಮತ್ತು ಆರ್ಥಿಕ ಚಟುವಟಿಕೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಅವರು ಪ್ರಧಾನಿ ಹೇಳಿದ್ದಾರೆ.