ವಾಷಿಂಗ್ಟನ್: ಅಮೆರಿಕದ ಚುನಾಯಿತ ಅಧ್ಯಕ್ಷ ಜೋ ಬೈಡನ್ ತಮ್ಮ ಶ್ವೇತಭವನದ ಡಿಜಿಟಲ್ ತಂಡದ ಸದಸ್ಯರನ್ನು ಸೋಮವಾರ ಪ್ರಕಟಿಸಿದ್ದು, ಕಾಶ್ಮೀರ ಮೂಲದ ಆಯಿಷಾ ಶಾ ಅವರಿಗೆ ಉತ್ತಮ ಸ್ಥಾನವನ್ನು ನೀಡಿದ್ದಾರೆ.
ರಾಬ್ ಫ್ಲೆಹರ್ಟಿ ನೇತೃತ್ವದ ಡಿಜಿಟಲ್ ತಂಡದ ಪಾರ್ಟ್ನರ್ಶಿಪ್ ಮ್ಯಾನೇಜರ್ ಆಗಿ ಆಯಿಷಾ ಅವರನ್ನು ನೇಮಕ ಮಾಡಲಾಗಿದೆ. ಭಾರತದ ಕಾಶ್ಮೀರ ಮೂಲದ ಆಯಿಷಾ ಅಮೆರಿಕದ ಲೂಯಿಸಿಯಾನದಲ್ಲಿ ಬೆಳೆದವರು. ಜೋ ಬೈಡೆನ್ - ಕಮಲಾ ಹ್ಯಾರಿಸ್ ಅವರ ಚುನಾವಣಾ ಪ್ರಚಾರದಲ್ಲಿ ಡಿಜಿಟಲ್ ಪಾರ್ಟ್ನರ್ಶಿಪ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದ್ದರು.
ಓದಿ: ವುಹಾನ್ನಲ್ಲಿನ ಕೋವಿಡ್ ವರದಿ ಮಾಡಿದ ಪತ್ರಕರ್ತೆಯನ್ನು ಜೈಲಿಗಟ್ಟಿದ ಚೀನಾ
ಪ್ರಸ್ತುತ ಇವರು ಸ್ಮಿತ್ಸೋನಿಯನ್ ಸಂಸ್ಥೆಯಲ್ಲಿ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದಕ್ಕೂ ಮೊದಲು ಆಯಿಷಾ, ಜಾನ್ ಎಫ್ ಕೆನಡಿ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್‌ನ ಕಾರ್ಪೊರೇಟ್ ಫಂಡ್‌ನಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಕೆಲಸ ಮಾಡಿದ್ದರು.
ಬೈಡನ್ರ ಡಿಜಿಟಲ್ ತಂಡದಲ್ಲಿ ಇನ್ನೂ 10 ಮಂದಿಗೆ ವಿವಿಧ ಹುದ್ದೆಗಳನ್ನು ನೀಡಲಾಗಿದ್ದು, ಇವರು ಅಮೆರಿಕ ಸರ್ಕಾರ ಹಾಗೂ ಜನರ ನಡುವೆ ಸಂಪರ್ಕ ಕಲ್ಪಿಸುವಲ್ಲಿ ವಿಶೇಷ ಪಾತ್ರ ವಹಿಸಲಿದ್ದಾರೆ.