ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಅವರ ಖಾತೆಯನ್ನು ನಿಷೇಧಿಸುವ ಫೇಸ್‌ಬುಕ್ ನಿರ್ಧಾರವನ್ನು ಸ್ವತಂತ್ರ ಮೇಲ್ವಿಚಾರಣಾ ಮಂಡಳಿ ಎತ್ತಿಹಿಡಿದ ನಂತರ, ಅಮೆರಿಕದ ಮಾಜಿ ಅಧ್ಯಕ್ಷರು ಇದು ಫೇಸ್‌ಬುಕ್‌ನಿಂದ ಮಾತ್ರವಲ್ಲ, ಗೂಗಲ್ ಮತ್ತು ಟ್ವಿಟರ್‌ನಿಂದಲೂ ನಾನು ತೆರುತ್ತಿರುವ ರಾಜಕೀಯ ಬೆಲೆ ಎಂದಿದ್ದಾರೆ.
ಟ್ರಂಪ್ ಅವರು ಫೇಸ್‌ಬುಕ್, ಗೂಗಲ್ ಮತ್ತು ಟ್ವಿಟರ್‌ಗಳನ್ನು ದೂಷಿಸಿ ಅವರನ್ನು "ಭ್ರಷ್ಟ" ಎಂದು ಕರೆದಿದ್ದಾರೆ.
ಮುಕ್ತ ಅಭಿವ್ಯಕ್ತಿಯನ್ನು ಅಮೆರಿಕ ಅಧ್ಯಕ್ಷರಿಂದ ಕಿತ್ತುಕೊಂಡು ಹೋಗಲಾಗಿದೆ. ಎಡಪಂಥೀಯರು ಸತ್ಯಕ್ಕೆ ಹೆದರುತ್ತಾರೆ ಎಂದು ಅವರು ಬುಧವಾರ ತಡರಾತ್ರಿ ನ್ಯೂಯಾರ್ಕ್ ಟೈಮ್ಸ್ಗೆ ಮಾಡಿದ ಇಮೇಲ್ನಲ್ಲಿ ತಿಳಿಸಿದ್ದಾರೆ.
ಟ್ರಂಪ್ ಅವರ ಪೋಸ್ಟ್‌ಗಳು ಫೇಸ್‌ಬುಕ್‌ನ ನಿಯಮಗಳನ್ನು ತೀವ್ರವಾಗಿ ಉಲ್ಲಂಘಿಸಿವೆ ಮತ್ತು ಅಮೆರಿಕದ ಕ್ಯಾಪಿಟಲ್ ಕಟ್ಟಡದ ಮೇಲಿನ ದಾಳಿಯಲ್ಲಿ ಭಾಗಿಯಾಗಿರುವವರಿಗೆ ಅವರು ನೀಡಿದ ಬೆಂಬಲದ ಮಾತುಗಳು ಹಿಂಸಾಚಾರವನ್ನು ಕಾನೂನುಬದ್ಧಗೊಳಿಸಿದವು ಎಂದು ಮಂಡಳಿ ಕಂಡುಕೊಂಡಿದೆ.
ಸೋಷಿಯಲ್ ಮೀಡಿಯಾದಲ್ಲಿ ಅಧ್ಯಕ್ಷ ಟ್ರಂಪ್ ಅವರ ಕ್ರಮಗಳು ಹಿಂಸಾಚಾರವನ್ನು ಉತ್ತೇಜಿಸಿತು ಮತ್ತು ಕಾನೂನುಬದ್ಧಗೊಳಿಸಿತು. ಇದು ಫೇಸ್‌ಬುಕ್‌ನ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಮೇಲ್ವಿಚಾರಣಾ ಮಂಡಳಿಯ ಆಡಳಿತ ನಿರ್ದೇಶಕ ಥಾಮಸ್ ಹ್ಯೂಸ್ ಹೇಳಿದ್ದಾರೆ.
ಚುನಾವಣಾ ವಂಚನೆ ಮತ್ತು ಸತತ ಕ್ರಮಗಳ ಕರೆಗಳ ಆಧಾರರಹಿತ ನಿರೂಪಣೆಯನ್ನು ಕಾಪಾಡಿಕೊಳ್ಳುವ ಮೂಲಕ ಹಿಂಸಾಚಾರದ ಗಂಭೀರ ಅಪಾಯವುಂಟಾಗುವಂತಹ ವಾತಾವರಣವನ್ನು ಟ್ರಂಪ್ ಸೃಷ್ಟಿಸಿದ್ದಾರೆ. ಜನವರಿ 7ರಂದು ಅಧ್ಯಕ್ಷರನ್ನು ಅಮಾನತುಗೊಳಿಸುವ ಫೇಸ್‌ಬುಕ್ ನಿರ್ಧಾರವು ಸರಿಯಾದದ್ದು ಎಂದು ಪ್ರತಿಪಾದಿಸಿದರು.
ಟ್ರಂಪ್‌ರನ್ನು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಿಂದ ಅಮಾನತುಗೊಳಿಸಬೇಕಾಗಿತ್ತು ಎಂದು ಮಂಡಳಿ ತೀರ್ಮಾನಿಸಿದರೆ, ಸರಿಯಾದ ದಂಡ ವಿಧಿಸುವಲ್ಲಿ ಫೇಸ್‌ಬುಕ್ ವಿಫಲವಾಗಿದೆ ಎಂದು ತಿಳಿದುಬಂದಿದೆ.