ವಾಷಿಂಗ್ಟನ್: ಕರೊನಾ ವೈರಸ್ ಹರಡುತ್ತಿದ್ದಂತೆ ಅಮೆರಿಕದ ಆರ್ಥಿಕತೆಯು ಕುಂಠಿತಗೊಳ್ಳುತ್ತಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಶತಮಾನದಲ್ಲಿ ಅಮೆರಿಕ ಎದುರಿಸಿದ ಅತ್ಯಂತ ಅಪಾಯಕಾರಿ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ.
ಟ್ರಂಪ್ ಕೈಗೊಳ್ಳುವ ನಿರ್ಧಾರಗಳು ಅವರ ಮರು ಚುನಾವಣೆಯ ಭವಿಷ್ಯ ಮತ್ತು ದೇಶದ ಸ್ವರೂಪವನ್ನು ರೂಪಿಸಲಿವೆ. ಇದೀಗ ಅಮೆರಿಕದಲ್ಲಿ ಕೊರೊನಾ ವೈರಸ್ ಗಂಭೀರ ಸಮಸ್ಯೆಯಾಗಿದ್ದು, ಸಂಶೋಧನೆಯೊಂದು 1,00,000ಕ್ಕೂ ಹೆಚ್ಚು ಅಮೆರಿಕನ್ನರು ಕೊರೊನಾದಿಂದಾಗಿ ಪ್ರಾಣ ಕಳೆದುಕೊಳ್ಳುತ್ತಾರೆ ಮತ್ತು ಲಕ್ಷಾಂತರ ಜನರು ರೋಗಿಗಳಾಗುತ್ತಾರೆ ಎಂದು ಎಚ್ಚರಿಸಿದೆ.
ಹಲವು ಅಮೆರಿಕನ್ನರು ಈಗಾಗಲೇ ಉದ್ಯೋಗ ಕಳೆದುಕೊಂಡಿದ್ದಾರೆ. ಆರ್ಥಿಕ ಪರಿಸ್ಥಿತಿಯೂ ಬಿಗಡಾಯಿಸಿದ್ದು, ಕೋವಿಡ್-19ನಿಂದಾಗಿ ಮರಣ ಪ್ರಮಾಣವೂ ಅಧಿಗೊಳ್ಳುತ್ತಿದೆ. ಟ್ರಂಪ್ ನಾಯಕತ್ವ ಮತ್ತು ರಾಜಕೀಯ ಭವಿಷ್ಯದ ಪರೀಕ್ಷೆ ಎದುರಿಸುತ್ತಿದ್ದಾರೆ. ರಾಜಕೀಯವಾಗಿ ಟ್ರಂಪ್ ಎದುರಿಸಿದ ಸವಾಲುಗಳಿಗಿಂತ ಈ ಸಾಂಕ್ರಾಮಿಕ ರೋಗದ ಸವಾಲು ಕಷ್ಟಕರವಾಗಿದೆ.
ಹಾಗಾಗಿ ಕೊರೊನಾ ವೈರಸ್ ತಡೆಗಟ್ಟುವಲ್ಲಿ ಡೊನಾಲ್ಡ್ ಟ್ರಂಪ್ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಬೇಕಾಗಿದೆ. ಕೊರೊನಾ ತಡೆಗಟ್ಟುವುದರ ಜೊತೆಗೆ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವುದರ ಬಗ್ಗೆಯೂ ಗಮನಹರಿಸಬೇಕಿದೆ.
ಈಗಾಗಲೇ ಅಮೆರಿಕಾದಲ್ಲಿ ಅಗತ್ಯ ವ್ಯವಹಾರಗಳನ್ನು ಹೊರತುಪಡಿಸಿ, ಉಳಿದೆಲ್ಲವುಗಳನ್ನು ಸ್ಥಗಿತಗೊಳಿಸಲಾಗಿದೆ. ಕೋವಿಡ್-19 ಚಿಕಿತ್ಸೆಗಾಗಿ ವಿಶೇಷ ಪ್ಯಾಕೇಜ್ ಘೋಷಣೆಯಾಗಿದ್ದರೂ, ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಮನೆಯಲ್ಲಿಯೇ ಇರುವಂತೆ ನಾಗರಿಕೆ ಸೂಚಿಸಿದ್ದರೂ, ವೈರಸ್ ಹರಡುತ್ತಿದೆ.
ಅಮೆರಿಕದಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳು ಹಾಗೂ ಉಪಕರಣಗಳನ್ನು ಒದಗಿಸುವ ಮೂಲಕ ಸಾವಿನ ಸಂಖ್ಯೆ ಕಡಿಮೆಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಕೊರೊನಾ ತಡೆಗಟ್ಟಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇನ್ನಷ್ಟು ಕಠಿಣ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆಗಳಿವೆ.