ಬಾಲ್ಯದಲ್ಲಿಯೇ ಮಕ್ಕಳು ಬೊಜ್ಜು ಬರಲು, ಕೊಬ್ಬಿನಂಶವುಳ್ಳ ಆಹಾರ ಪದಾರ್ಥಗಳು ಹಾಗೂ ಕರುಳಿನಲ್ಲಿ ಉತ್ಪಾದನೆಯಾಗುವ ಬ್ಯಾಕ್ಟೀರಿಯಾಗಳು ಕಾರಣ ಎಂದು ವೇಕ್ ಫಾರೆಸ್ಟ್ ಬ್ಯಾಪೆಸ್ಟ್ ಆರೋಗ್ಯ ಸಂಸ್ಥೆ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಅಲ್ಲದೇ, ಇವು ಪ್ರತಿರಕ್ಷಣಾ ಕೋಶಗಳು ಹಾಗೂ ಚಯಾಪಚಯ ಅಂಗಗಳೊಂದಿಗೆ ನಡೆಸುವ ಕ್ರಿಯೆಗಳಿಂದಾಗಿ ಮಕ್ಕಳು ದಪ್ಪವಾಗುವ ಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಇನ್ನು ದಪ್ಪವಾಗುವುದಕ್ಕೆ ಪ್ರಮುಖ ಕಾರಣ ಎಂದರೆ ಹೆಚ್ಚು ಕ್ಯಾಲರಿಯುಳ್ಳ ಆಹಾರ ಪದಾರ್ಥಗಳು. ಅಲ್ಲದೇ ನಮ್ಮ ಕರುಳಿನಲ್ಲಿ ವಾಸಿಸುವ ಸೂಕ್ಷ್ಮ ಜೀವಿಗಳು ಕೂಡ ಬೊಜ್ಜು ಬೆಳೆಯುವುದಕ್ಕೆ ಕಾರಣ ಎಂದು ವೇಕ್ ಬ್ಯಾಪ್ಟಿಸ್ಟ್ನ ಭಾಗವಾದ ವೇಕ್ ಫಾರೆಸ್ಟ್ ಸ್ಕೂಲ್ ಆಫ್ ಮೆಡಿಸನ್ನಲ್ಲಿರುವ ವಿಮರ್ಶಕ ಲೇಖಕ ಡಾ. ಹಾರಿಯೋಮ್ ಯಾದವ್ ತಿಳಿಸಿದ್ದಾರೆ.
ಅಮೆರಿಕದಲ್ಲಿ 1970ರ ದಶಕದ ಸುಮಾರಿಗೆ ಸ್ಥೂಲಕಾಯದಿಂದ ಬಳಲುತ್ತಿರುವ ಮಕ್ಕಳಿಗೆ ಹೋಲಿಸಿದ್ರೆ, ಈಗ ಮೂರು ಪಟ್ಟು ಹೆಚ್ಚಾಗಿದೆ. ಶಾಲಾ ವಯಸ್ಸಿನ ಮಕ್ಕಳಲ್ಲಿ ಅಂದ್ರೆ 6 ರಿಂದ 14 ವರ್ಷದೊಳಗಿನ ಮಕ್ಕಳಲ್ಲಿ ಈ ಕಾಯಿಲೆ ಹೆಚ್ಚಾಗಿ ಕಂಡು ಬರುತ್ತಿದೆ. ಅಲ್ಲದೇ ಪ್ರತಿ ವರ್ಷ ಶೇಕಡ 2.3 ರಷ್ಟು ಹೆಚ್ಚಾಗಿ ಈ ಕಾಯಿಲೆ ವ್ಯಾಪಿಸುತ್ತಿದೆ ಎಂದು ರೋಗ ನಿಯಂತ್ರಣ ತಡೆಗಟ್ಟುವಿಕೆ ಕೇಂದ್ರ ತಿಳಿಸಿದೆ. ಇದು ಸೂಕ್ತ ಬೆಳವಣಿಗೆಯಲ್ಲ.. ಜೊತೆಗೆ ಮುಂದಿನ ಪೀಳಿಗೆಗೆ ಆಘಾತಕಾರಿ ಎಂದು ಆರೋಗ್ಯ ಇಲಾಖೆ ಆತಂಕ ವ್ಯಕ್ತಪಡಿಸಿದೆ.
ಮಗು ತಾಯಿಯ ಗರ್ಭದಲ್ಲಿರುವಾಗಲೇ ಈ ರೋಗ ಕಾಣಿಸಿಕೊಳ್ಳುತ್ತದೆ.. ಅಂದರೆ, ತಾಯಿಯ ಆರೋಗ್ಯ, ಆಹಾರ ಪದ್ಧತಿ, ವ್ಯಾಯಾಮ, ಜೀವನ ವಿಧಾನ ಅಲ್ಲದೇ ಮಗುವಿನ ಜನನ ವಿಧಾನ(ನಾರ್ಮಲ್, ಸಿಸೇರಿಯನ್) ಕೂಡ ಮಗುವಿನ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ ಎಂದು ಯಾದವ್ ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.
ಈ ಎಲ್ಲ ಸಮಸ್ಯೆಗಳನ್ನು ನಿವಾರಿಸಲು ಜನರಿಗೆ ವೈದ್ಯರ ನೆರವು ಬೇಕು. ಈ ಬಗ್ಗೆ ಅವರಿಗೆ ಸಾಮಾನ್ಯ ತಿಳಿವಳಿಕೆ ನೀಡಿದ್ರೆ ಈ ಸಮಸ್ಯೆಗಳನ್ನು ನಿವಾರಿಸಬಹುದು. ಮುಂದಿನ ಪೀಳಿಗೆಯ ಉತ್ತಮ ಜೀವನಕ್ಕಾಗಿ ಸಾಮಾನ್ಯ ಜನರಿಗೆ ವಿಜ್ಞಾನದ ಅರಿವು ಅತ್ಯವಶ್ಯಕ ಎಂಬುದು ಯಾದವ್ ಅಭಿಪ್ರಾಯ.. ಅಲ್ಲದೇ, ಜನರಿಗೆ ಈ ಬಗ್ಗೆ ಅರಿವು ಮೂಡಿಸಲು ಬೇಕಾದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಈ ಸಂಶೋಧನಾ ವರದಿ ವೈದ್ಯರಿಗೆ ತಲುಪಬೇಕು. ಯಾಕೆಂದರೆ, ಅವರು ಈ ಬಗ್ಗೆ ರೋಗಿಗಳೊಂದಿಗೆ ಚರ್ಚಿಸಿ ಸಾಧ್ಯವಾದಷ್ಟು ಅವರಲ್ಲಿ ಅರಿವು ಮೂಡಿಸಬಹುದು. ಇದ್ರಿಂದ ಜನರ ಜೀವನ ಶೈಲಿಯೂ ಬದಲಾಗಬಹುದು. ಅಲ್ಲದೇ ಈ ಬಗ್ಗೆ ತಾಯಂದಿರಿಗೂ ಅರಿವಿದ್ದರೆ, ತಮ್ಮ ಮಕ್ಕಳು ಭವಿಷ್ಯದಲ್ಲಿ ಅನುಭವಿಸಬೇಕಾದ ತೊಂದರೆ ತಪ್ಪಿಸಬಹುದು ಎಂದಿದ್ದಾರೆ ಡಾ.ಹಾರಿಯೋಮ್ ಯಾದವ್.