ಮಿನ್ನೇಸೋಟ (ಯು.ಎಸ್): ಜಾರ್ಜ್ ಫ್ಲಾಯ್ಡ್ ಹತ್ಯೆ ಆರೋಪದ ಮಿನ್ನಿಯಾಪೋಲಿಸ್ನ ಪೊಲೀಸ್ ಅಧಿಕಾರಿ ಮೊದಲ ಬಾರಿಗೆ ನ್ಯಾಯಾಲಯಕ್ಕೆ ಹಾಜರಾಗಿದ್ದು, ಜಾಮೀನು ಪಡೆಯಲು ಆತ 1.25 ಮಿಲಿಯನ್ ಡಾಲರ್ ಪಾವತಿಸಬೇಕಿದೆ. ಅಂದರೆ, ಭಾರತೀಯ ಲೆಕ್ಕದಲ್ಲಿ ಬರೋಬ್ಬರಿ 9.43ಕೋಟಿ ರೂ.
ಆರೋಪದ ತೀವ್ರತೆ ಮತ್ತು ಸಾರ್ವಜನಿಕರ ಆಕ್ರೋಶದಿಂದಾಗಿ ಜಾಮೀನಿನ ಮೊತ್ತವನ್ನ 1 ಮಿಲಿಯನ್ಗಿಂತ ಹೆಚ್ಚಿಗೆ ನಿಗದಿ ಪಡಿಸುವಂತೆ ವಕೀಲರು ಉಲ್ಲೇಖಿಸಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಡೆರೆಕ್ ಚೌವಿನ್ ಎರಡನೇ ಹಂತದ ಕೊಲೆ ಮತ್ತು ನರಹತ್ಯೆಯ ಆರೋಪ ಎದುರಿಸುತ್ತಿದ್ದು, ಇತರ ಮೂವರು ಅಧಿಕಾರಿಗಳ ಮೇಲೆ ಕೊಲೆಗೆ ಸಹಾಯ ಮಾಡಿದ ಆರೋಪವಿದೆ.
ಮೇ 25ರಂದು ಮಿನ್ನಿಯಾ ಪೊಲೀಸ್‌ನಲ್ಲಿ ಬಂಧನಕ್ಕೊಳಗಾಗಿದ್ದ ಫ್ಲಾಯ್ಡ್‌ನ ಕುತ್ತಿಗೆಯ ಮೇಲೆ ಡೆರೆಕ್ ಚೌವಿನ್ ಎಂಬ ಪೊಲೀಸ್ ಅಧಿಕಾರಿ ಸುಮಾರು ಒಂಬತ್ತು ನಿಮಿಷಗಳ ಕಾಲ ಮಂಡಿಯೂರಿದ್ದರು. ಇದು ಜಾರ್ಜ್ ಫ್ಲಾಯ್ಡ್ ಸಾವಿಗೆ ಕಾರಣವಾಗಿತ್ತು. ತಕ್ಷಣ ಡೆರೆಕ್ ಚೌವಿನ್ ಮತ್ತು ಇತರ ಮೂವರು ಪೊಲೀಸ್ ಅಧಿಕಾರಿಗಳನ್ನು ವಜಾ ಮಾಡಲಾಗಿತ್ತು.