ವಾಷಿಂಗ್ಟನ್ : ಕೊರೊನಾ ಸೋಂಕು ಮತ್ತು ಕ್ಯಾಪಿಟಲ್ನಲ್ಲಿ ನಡೆದ ಹಿಂಸಾಚಾರ ನಡುವೆ ಜೋ ಬೈಡನ್ ಹಾಗೂ ಕಮಲಾ ಹ್ಯಾರಿಸ್ ಅಮೆರಿಕದ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಸಮಾರಂಭ ಅಮೆರಿಕದ ಇತಿಹಾಸದಲ್ಲಿ ಅತ್ಯಂತ ವಿಭಿನ್ನವಾಗಿರಲಿದೆ ಎಂದು ಡೆಮಾಕ್ರಟಿಕ್ ಪಕ್ಷ ಹೇಳಿಕೊಂಡಿದೆ.
ಉದ್ಘಾಟನಾ ಸಮಿತಿಯ ಪ್ರಕಾರ, ಈ ವರ್ಷದ ಉದ್ಘಾಟನಾ ಸಮಾರಂಭದ ಘೋಷವಾಕ್ಯ 'ಅಮೆರಿಕಾ ಯುನೈಟೆಡ್' ಆಗಿಲಿರಲಿದೆ. ಜೊತೆಗೆ ಉದ್ಘಾಟನಾ ದಿನದ ಹಿಂದಿನ ದಿನ ರಾಷ್ಟ್ರವ್ಯಾಪಿ ಕೋವಿಡ್ ಸ್ಮರಣ ದಿನವನ್ನಾಗಿ ಆಚರಿಸಲು ಯೋಜಿಸಲಾಗಿದೆ.
ರಾಷ್ಟ್ರವ್ಯಾಪಿ ಕೋವಿಡ್ ಸ್ಮರಣ ದಿನದ ಅಂಗವಾಗಿ ಅಮೆರಿಕದ ನಗರಗಳಲ್ಲಿ ಕಟ್ಟಡಗಳು ವಿದ್ಯುತ್ ದೀಪಗಳ ಅಲಂಕಾರದಿಂದ ಬೆಳಗಲಿವೆ. ಜೊತೆಗೆ ಕೊರೊನಾದಿಂದ ಸಾವನ್ನಪ್ಪಿದವರ ನೆನಪಿಗಾಗಿ ಚರ್ಚ್ಗಳಲ್ಲಿ ಘಂಟೆಗಳನ್ನು ಮೊಳಗಿಸಲಾಗುತ್ತದೆ.
ಉದ್ಘಾಟನಾ ದಿನ ಜನವರಿ 20ರಂದೇ ನಡೆಯೋದೇಕೆ?: ನವೆಂಬರ್ 2020ರಂದು ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ಗೆದ್ದಿದ್ದರೂ ಕೂಡ ಅಧಿಕಾರ ಹಸ್ತಾಂತರವಾಗಿರಲಿಲ್ಲ. ಡೊನಾಲ್ಡ್ ಟ್ರಂಪ್ ಚುನಾವಣೆಯ ಫಲಿತಾಂಶ ಒಪ್ಪಿಕೊಳ್ಳಲಿಲ್ಲ ಎಂಬುದು ಬೇರೆ ವಿಚಾರವಾದ್ರೂ, ಅಮೆರಿಕ ಸಂವಿಧಾನದ ಪ್ರಕಾರ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಹುದ್ದೆಯ ಅವಧಿ ಜನವರಿ 20ರ ಮಧ್ಯಾಹ್ನ ಕೊನೆಗೊಳ್ಳಲಿದೆ. ಈ ಹಿನ್ನೆಲೆ ಅಂದು ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಹುದ್ದೆಗೆ ಚುನಾಯಿತರನ್ನು ಆಯ್ಕೆ ಮಾಡಲಾಗುತ್ತದೆ.
ಇದಕ್ಕೂ ಮೊದಲು ಮಾರ್ಚ್ 4ರಂದು ಹೊಸ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಮಾಡಲಾಗುತ್ತಿತ್ತು. ಆದರೆ, 1933ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ಮಾಡಿ ಚುನಾವಣೆ ನಡೆದ ಎರಡು ತಿಂಗಳೊಳಗೆ ಅಧಿಕಾರ ಹಸ್ತಾಂತರ ಮಾಡಬೇಕೆಂದು ಬದಲಾವಣೆ ಮಾಡಲಾಯಿತು.
ಹಾಲಿ ಅಧ್ಯಕ್ಷರು ಉಳಿದ ಕೆಲಸವನ್ನು ಪೂರ್ಣಗೊಳಿಸಲು ಹಾಗೂ ಆಡಳಿತಾತ್ಮಕ, ರಕ್ಷಣಾತ್ಮಕ ಹಾಗೂ ರಾಷ್ಟ್ರೀಯ ಭದ್ರತೆಯಂತಹ ವಿಚಾರಗಳಲ್ಲಿನ ಹೊಸ ಸರ್ಕಾರಕ್ಕೆ ಅನುಕೂಲವಾಗುವಂತೆ ಹೊಸ ಸಿಬ್ಬಂದಿಯಲ್ಲಿ ಬದಲಾವಣೆ ತರಲು ಈ ಎರಡು ತಿಂಗಳ ಅವಧಿಯನ್ನು ಮೀಸಲಿಡಲಾಗಿದೆ.
ಅಧಿಕಾರ ಹಸ್ತಾಂತರ ಎಲ್ಲಿ, ಯಾವಾಗ? : ಅಧಿಕೃತವಾಗಿ ಅಮೆರಿಕದ ಅಧ್ಯಕ್ಷರಾಗಬೇಕೆಂದ್ರೆ ಅವರು ಮೊದಲಿಗೆ ಪ್ರಮಾಣವಚನ ಸ್ವೀಕರಿಸಬೇಕು. ಇದು ಸಂಪ್ರದಾಯಬದ್ಧವಾಗಿ ಮುಂದುವರೆದುಕೊಂಡು ಬಂದಿದೆ. ಈ ಹಿನ್ನೆಲೆ ಜೋ ಬೈಡನ್ ಅಮೆರಿಕದ ಕಾಲಮಾನದಂತೆ ಅಮೆರಿಕದ ಕ್ಯಾಪಿಟಲ್ನಲ್ಲಿ ಬೆಳಗ್ಗೆ 11 ಗಂಟೆಗೆ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಮೆರಿಕದ ಸುಪ್ರೀಂ ಕೋರ್ಟ್ನ ಮುಖ್ಯನ್ಯಾಯಾಧೀಶರಾದ ಜಾನ್ ಜಿ ರಾಬರ್ಟ್ಸ್ ಜೋ ಬೈಡನ್ ಅವರಿಗೆ ಪ್ರಮಾಣವಚನ ಬೋಧಿಸಲಿದ್ದಾರೆ.
ಉಪಾಧ್ಯಕ್ಷರಾಗಿ ಚುನಾಯಿತರಾದ ಕಮಲಾ ಹ್ಯಾರಿಸ್ಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಸೋನಿಯಾ ಸೋಟೊಮೇಯರ್ ಅವರು ಪ್ರಮಾಣವಚನ ಬೋಧಿಸಲಿದ್ದಾರೆ. ಇದೇ ಮೊದಲ ಬಾರಿಗೆ ದಕ್ಷಿಣ ಏಷ್ಯಾದ ಕಪ್ಪು ವರ್ಣೀಯ ಮಹಿಳೆ ಅಮೆರಿಕದ ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿರುವುದು ಐತಿಹಾಸಿಕವಾಗಿರಲಿದೆ.
ಮೂಲಗಳ ಪ್ರಕಾರ ಪ್ರಮಾಣವಚನ ಸ್ವೀಕರಿಸಲು ಕಮಲಾ ಹ್ಯಾರಿಸ್ ಸೋಟೊಮೇಯರ್ ಅವರನ್ನು ತಾವೇ ಆಯ್ಕೆ ಮಾಡಿಕೊಂಡಿದ್ದಾರೆ. ಪ್ರಮಾಣವಚನ ಸ್ವೀಕಾರಕ್ಕಾಗಿ ಅವರು ಎರಡು ಬೈಬಲ್‌ಗಳನ್ನು ಬಳಸಲಿದ್ದು, ಅದರಲ್ಲಿ ಒಂದು ಬೈಬಲ್ ಸುಪ್ರೀಂಕೋರ್ಟ್‌ನ ಮೊದಲ ಕಪ್ಪುವರ್ಣೀಯ ನ್ಯಾಯಮೂರ್ತಿ ತುರ್ಗುಡ್ ಮಾರ್ಷಲ್‌ಗೆ ಸೇರಿದೆ.
ಉದ್ಘಾಟನಾ ಸಮಾರಂಭವನ್ನು ಮಧ್ಯಾಹ್ನ 2 ಗಂಟೆಗೆ ನಿಗದಿ ಮಾಡಲಾಗಿದೆ. ಈ ವೇಳೆ ಹಾಲಿ ಅಧ್ಯಕ್ಷರು ಹೊಸ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮಕ್ಕೆ ಹಾಜರಾಗುವುದು ವಾಡಿಕೆಯಾಗಿದೆ. ಆದರೆ, ಇದು ಕಡ್ಡಾಯವಲ್ಲದ ಕಾರಣದಿಂದ ಡೊನಾಲ್ಡ್ ಟ್ರಂಪ್ ಈ ಬಾರಿ ಸಮಾರಂಭಕ್ಕೆ ಹಾಜರಾಗುವುದಿಲ್ಲ.
ಲೇಡಿ ಗಾಗಾ ರಾಷ್ಟ್ರಗೀತೆ! : ಜೋ ಬೈಡನ್ ಪ್ರಮಾಣವಚನ ಸ್ವೀಕರಿಸುವ ಸಮಾರಂಭದಲ್ಲಿ ಕ್ಯಾಪಿಟಲ್‌ನ ಪಶ್ಚಿಮ ಭಾಗದಲ್ಲಿ ಅಮೆರಿಕದ ಪಾಪ್ ಗಾಯಕಿ ಲೇಡಿ ಗಾಗಾ ರಾಷ್ಟ್ರಗೀತೆ ಹಾಡಲಿದ್ದಾರೆ. ಇದೇ ವೇಳೆ ಕವನ ವಾಚನ, ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತ ಜೆನ್ನಿಫರ್ ಲೋಪೆಜ್ ಅವರ ಸಂಗೀತ ಪ್ರದರ್ಶನವೂ ನಡೆಯಲಿದೆ. ಇದಾದ ನಂತರ ಬೈಡನ್ ಅವರ ಕುಟುಂಬದೊಂದಿಗೆ 30 ವರ್ಷಗಳ ಪರಿಚಯವಿರುವ ಡೆಲವೇರ್‌ನ ಬೆಥೆಲ್ ಆಫ್ರಿಕನ್ ಮೆಥೋಡಿಸ್ಟ್ ಎಪಿಸ್ಕೋಪಲ್ ಚರ್ಚ್‌ನ ರೆವ್ ಡಾ. ಸಿಲ್ವೆಸ್ಟರ್ ಬೀಮನ್ ಅವರ ಚರ್ಚ್ಗೆ ತೆರಳಿ ಆಶೀರ್ವಾದ ಪಡೆಯಲಿದ್ದಾರೆ.
ಇದಾದ ನಂತರ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಮುಂದಿನ ಸಮಾರಂಭಕ್ಕೆ ಹೊರಡುತ್ತಾರೆ. 1897ರಲ್ಲಿ ಆರಂಭವಾದ ಭೋಜನಕೂಟ ಕಾರ್ಯಕ್ರಮವನ್ನು ಮೊದಲ ಅಧಿಕೃತ ಕಾರ್ಯಕ್ರಮ ಎಂದು ಪರಿಗಣಿಸಲಾಗುತ್ತದೆ. ನಂತರ ಮಿಲಿಟರಿ ರೆಜಿಮೆಂಟ್‌ಗಳು, ಪಕ್ಷದ ಕಾರ್ಯಕರ್ತರು ಮತ್ತು ನಾಗರಿಕರ ಜೊತೆ ಬೈಡೆನ್ ಮತ್ತು ಹ್ಯಾರಿಸ್ ಕ್ಯಾಪಿಟಲ್‌ನ ಪೂರ್ವ ಭಾಗಕ್ಕೆ ತೆರಳಿ ಪ್ರಮಾಣವಚನ ಸ್ವೀಕರಿಸುತ್ತಾರೆ.
ಅಧಿಕಾರ ಹಸ್ತಾಂತರ ದಿನದ ರಾತ್ರಿ ನಟ ಟಾಮ್ ಹ್ಯಾಂಕ್ಸ್ ಮತ್ತು ಸಂಗೀತಗಾರ ಜಾನ್ ಬಾನ್ ಜೊವಿ, ಪಾಪ್ ತಾರೆಗಳಾದ ಡೆಮಿ ಲೊವಾಟೋ ಮತ್ತು ಜಸ್ಟೀನ್ ಟಿಂಬರ್ಲೇಕ್ ಅವರು ಮನರಂಜನಾ ಕಾರ್ಯಕ್ರಮವನ್ನು ಮಾಡಲಿದ್ದು, ಸುಮಾರು 90 ನಿಮಿಷಗಳು ನಡೆಯಲಿರುವ ಈ ಕಾರ್ಯಕ್ರಮ ಟಿವಿ ವಾಹಿನಿಗಳು ಮತ್ತು ಅಮೆಜಾನ್ ಪ್ರೈಮ್ ವಿಡಿಯೋ ಸೇರಿ ಆನ್ಲೈನ್ ಸ್ಟ್ರೀಮಿಂಗ್ ಕೂಡ ಇರುತ್ತದೆ.
ಸಮಾರಂಭದಲ್ಲಿ ವಿಶೇಷತೆಯೇನಿಲ್ಲ, ದುರಂತ ಮಾತ್ರ: ಈ ಬಾರಿ ವಿಶೇಷತೆ ಎಂಬುದಕ್ಕಿಂತ ದುರಂತ ಅಂದ್ರೆ ತಪ್ಪಾಗೋದಿಲ್ಲ. ನಿರ್ಗಮಿತ ಅಧ್ಯಕ್ಷರು ಶಾಂತಿಯುತ ಅಧಿಕಾರ ವರ್ಗಾವಣೆಯ ಸಂಕೇತವಾಗಿ ಪದಗ್ರಹಣ ಸಮಾರಂಭದಲ್ಲಿ ಭಾಗಿಯಾಗುವುದು ವಾಡಿಕೆಯಾಗಿತ್ತು.
ಆದರೆ, ಈ ಬಾರಿ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮಾರಂಭದಲ್ಲಿ ಭಾಗಿಯಾಗೋದಿಲ್ಲ. ಚುನಾವಣಾ ಫಲಿತಾಂಶದಂದೇ ಈ ಚುನಾವಣೆ ಮೋಸದಿಂದ ಕೂಡಿದೆ ಎಂದು ಆರೋಪಿಸಿದ ಅವರು, ಚುನಾವಣಾ ಫಲಿತಾಂಶವನ್ನು ಒಪ್ಪಿಕೊಂಡಿರಲಿಲ್ಲ. ಸುಪ್ರೀಂಕೋರ್ಟ್ಗೆ ಮೊರೆ ಹೋಗೋದಾಗಿ ಕೂಡ ಹೇಳಿದ್ದರು.
ಈ ಹೇಳಿಕೆ ನೀಡಿದ ನಂತರ ಅಮೆರಿಕ ಕ್ಯಾಪಿಟಲ್ನಲ್ಲಿ ಹಿಂಸಾಚಾರ ನಡೆದು ಹಲವರು ಸಾವನ್ನಪ್ಪಿದ್ದರು. ಈ ಎಲ್ಲಾ ಕಾರಣಗಳಿಂದ ಡೊನಾಲ್ಡ್ ಟ್ರಂಪ್ ಈ ಬಾರಿಯ ಸಮಾರಂಭಕ್ಕೆ ಹಾಜರಾಗುವುದಿಲ್ಲ. ಜೋ ಬೈಡನ್ ಸಮಾರಂಭಕ್ಕೆ ಕೆಲವು ಗಂಟೆಗಳ ಮೊದಲು ಟ್ರಂಪ್ ವಾಷಿಂಗ್ಟನ್ನಿಂದ ಬೇರೆಡೆಗೆ ಪ್ರಯಾಣ ಬೆಳೆಸಲಿದ್ದಾರೆ. ಆದರೆ, ನಿರ್ಗಮಿತ ಉಪಾಧ್ಯಕ್ಷ ಮೈಕ್ ಪೆನ್ಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಎಲ್ಲಾ ವರ್ಷಗಳಲ್ಲಿ ಅಧಿಕಾರ ಹಸ್ತಾಂತರವಾದ ದಿನದ ರಾತ್ರಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಭಾರಿ ಜನಸಂದಣಿಯಲ್ಲಿ ತಮ್ಮ ಸಂಗಾತಿಗಳೊಂದಿಗೆ ನೃತ್ಯ ಮಾಡುತ್ತಿದ್ದರು. ಆದರೆ, ಈ ಬಾರಿ ಜನಸಂದಣಿಗೆ ಅವಕಾಶವಿಲ್ಲ. ಇದರ ಜೊತೆಗೆ ಅಧ್ಯಕ್ಷರು, ಉಪಾಧ್ಯಕ್ಷರ ಮನರಂಜನಾ ಸಮಾರಂಭವನ್ನೂ ಕೂಡ ರದ್ದು ಮಾಡಲಾಗಿದೆ. ಕೊರೊನಾ ಮಾರ್ಗಸೂಚಿಯ ಕಾರಣಗಳಿಂದ ಜನದಟ್ಟಣೆ ಕಡಿಮೆ ಮಾಡುವ ಸಲುವಾಗಿ ಉದ್ಘಾಟನಾ ಸಮಿತಿ ಈ ನಿರ್ಧಾರಗಳನ್ನು ತೆಗೆದುಕೊಂಡಿದೆ.
ವಾಷಿಂಗ್ಟನ್ ಡಿಸಿಯ ಡೌನ್ ಟೌನ್ ಸಶಸ್ತ್ರ ಶಿಬಿರವನ್ನಾಗಿ ಮಾರ್ಪಾಡು ಮಾಡಲಾಗಿದೆ. ನ್ಯಾಷನಲ್ ಮಾಲ್ಗೆ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದೆ. ವಾಷಿಂಗ್ಟನ್ ಸ್ಮಾರಕವನ್ನು ಮುಚ್ಚಲಾಗಿದೆ. ಜನವರಿ 20ರಂದು 21,000 ನ್ಯಾಷನಲ್ ಗಾರ್ಡ್ ಪಡೆಗಳು ಮತ್ತು ಅನೇಕ ಸಂಸ್ಥೆಗಳು ಭದ್ರತಾ ಕಾರ್ಯ ಕೈಗೊಳ್ಳಲಿವೆ.
ಸಮಾರಂಭದಲ್ಲಿ ಎಂದಿನಂತೆ ನಡೆಯೋದೇನು?: ಎಲ್ಲಾ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಂತೆ ಬೈಡನ್ ಮತ್ತು ಕಮಲಾ ಹ್ಯಾರಿಸ್ ಕ್ಯಾಪಿಟಲ್ ಕಟ್ಟಡದ ಹೊರ ಭಾಗದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಉದ್ಘಾಟನಾ ಸಮಾರಂಭಕ್ಕಾಗಿ ರೂಪಿಸಿರುವ ವೆಬ್ಸೈಟ್ ಪ್ರಕಾರ ಬೈಡನ್ 'ಕೊರೊನಾ ಸೋಂಕನ್ನು ಸೋಲಿಸಿ, ಅಮೆರಿಕವನ್ನು ಚೇತರಿಸಿಕೊಳ್ಳುವಂತೆ ಮಾಡಿ ಒಂದುಗೂಡಿಸುವುದು' ಎಂಬ ವಿಚಾರದ ಬಗ್ಗೆ ಮಾತನಾಡಲಿದ್ದಾರೆ.
ಇದಾದ ನಂತರ ಮಿಲಿಟರಿಯಿಂದ ಸಂಪ್ರದಾಯಬದ್ಧವಾಗಿ ನೆರವೇರಲಿರುವ ಪಾಸ್ ದ ರಿವ್ಯೂ (ಪರೇಡ್) ನಡೆಯಲಿದ್ದು, ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಪೂರ್ಣಗೊಳಿಸಲಿದ್ದಾರೆ. ಇದು ಶಾಂತಿಯುತವಾಗಿ ಅಧಿಕಾರ ಹಸ್ತಾಂತರವನ್ನು ಸೂಚಿಸುತ್ತದೆ.
ಪ್ರಮಾಣವಚನದ ನಂತರ ಅಮೆರಿಕ ಪ್ರಥಮ ಮಹಿಳೆಯಾಗಲಿರುವ ಬೈಡನ್ ಪತ್ನಿ ಜಿಲ್ ಬೈಡನ್, ಕಮಲಾ ಹ್ಯಾರಿಸ್ ಪತಿ ಡೌಗ್ಲಾಸ್ ಎಮ್ಹಾಫ್ ತಮ್ಮ ಸಂಗಾತಿಗಳೊಡನೆ ಜೊತೆಗೂಡಿ ಆರ್ಲಿಂಗ್ಟನ್ ರಾಷ್ಟ್ರೀಯ ಸ್ಮಶಾನಕ್ಕೆ ಭೇಟಿ ನೀಡಿ ಸೈನಿಕರ ಸಮಾಧಿಗೆ ಮಾಲಾರ್ಪಣೆ ಮಾಡುತ್ತಾರೆ. ಈ ವೇಳೆ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಮಿಚೆಲ್ ಒಬಾಮಾ, ಬಿಲ್ ಕ್ಲಿಂಟನ್ ಮತ್ತು ಹಿಲರಿ ಕ್ಲಿಂಟನ್ ಕೂಡ ಪಾಲ್ಗೊಳ್ಳಲಿದ್ದಾರೆ.