ಕೆಲವೇ ಕ್ಷಣಗಳಲ್ಲಿ ಅಮೆರಿಕ ಅಧ್ಯಕ್ಷರಾಗಿ ಜೋ ಬೈಡನ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಬೆನ್ನಲ್ಲೇ ಟ್ರಂಪ್ ಆಡಳಿತದಲ್ಲಿ ತೆಗೆದುಕೊಳ್ಳಲಾಗಿದ್ದ ಕೆಲ ನಿರ್ಧಾರಗಳನ್ನು ಬೈಡನ್ ರದ್ದುಗೊಳಿಸುವ ಸಾಧ್ಯತೆಯಿದೆ.
2017ರಲ್ಲಿ ಏಳು ಬಹುಸಂಖ್ಯಾತ ಮುಸ್ಲಿಂ ರಾಷ್ಟ್ರಗಳ ಪ್ರಯಾಣಿಕರಿಗೆ ಯುಎಸ್ಗೆ ನಿರ್ಬಂಧ ವಿಧಿಸಿ ಟ್ರಂಪ್ ಆದೇಶಿಸಿದ್ದರು. ಮೊದಲಿಗೆ ಇರಾನ್, ಲಿಬಿಯಾ, ಸೊಮಾಲಿಯಾ, ಸಿರಿಯಾ, ಯೆಮೆನ್ ರಾಷ್ಟ್ರಗಳಿಗೆ ಮಾತ್ರ ನಿರ್ಬಂಧ ವಿಧಿಸಲಾಗಿತ್ತು.
ತದ ನಂತರ ವೆನೆಜುವೆಲಾ ಮತ್ತು ಉತ್ತರ ಕೊರಿಯಾಗೂ ಈ ನಿರ್ಬಂಧ ವಿಸ್ತರಿಸಿತು. ಹಾಗೆಯೇ, ನೈಜೀರಿಯಾ, ಸುಡಾನ್, ಮ್ಯಾನ್ಮಾರ್ ದೇಶಗಳೂ ಈ ಪಟ್ಟಿಗೆ ಸೇರ್ಪಡೆಯಾದವು.
ಜೋ ಬೈಡನ್ ಚುನಾವಣಾ ಪ್ರಚಾರದ ವೇಳೆ ನಾನು ಅಧ್ಯಕ್ಷನಾಗಿ ಆಯ್ಕೆಯಾದ್ರೆ, ಮುಸ್ಲಿಂ ರಾಷ್ಟ್ರಗಳಿಗೆ ವಿಧಿಸಿರುವ ಪ್ರಯಾಣ ನಿಷೇಧವನ್ನು ಪ್ರಮಾಣ ವಚನ ಸ್ವೀಕರಿಸಿದ ದಿನವೇ ರದ್ದುಗೊಳಿಸುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದರು.
ಜಬರಾ-ಹೇಯರ್ ನೋ ಹೇಟ್ ಆ್ಯಕ್ಟ್ ಮತ್ತು ಎಂಡ್ ರೇಸಿಯಲ್ ಅಂಡ್ ರಿಲಿಜಿಯಸ್ ಪ್ರೊಫೈಲಿಂಗ್ ಆ್ಯಕ್ಟ್ ನಂತಹ ಕಾಯ್ದೆಗಳನ್ನು ಅಂಗೀಕರಿಸಲು ಕಾಂಗ್ರೆಸ್ (ಅಮೆರಿಕದ ಸಂಸತ್ತು)ನೊಂದಿಗೆ ಕೆಲಸ ಮಾಡುವುದಾಗಿ ಬೈಡನ್ ಹೇಳಿದ್ದರು.
ಬೈಡನ್ ನಿರ್ಧಾರದಿಂದ ಆಗುವ ಬದಲಾವಣೆಗಳೇನು?
ಟ್ರಂಪ್ ಅವರ ಈ ನಿರ್ಧಾರದಿಂದ ಅಮೆರಿಕದಲ್ಲಿ ವಾಸಿಸುವ ಅಮೆರಿಕನ್ ಮುಸ್ಲಿಮರು ಶಾಶ್ವತವಾಗಿ ಅವರ ಕುಟುಂಬಗಳಿಂದ ದೂರ ಉಳಿಯಬೇಕಾದ ಪರಿಸ್ಥಿತಿ ಎದುರಾಗಿತ್ತು. ಬೈಡನ್ ಅವರ ಈ ಘೋಷಣೆ ಅವರಲ್ಲಿ ವಿಶ್ವಾಸ ಮೂಡಿಸಿತು. ಸೊಮಾಲಿಯಾ, ಸಿರಿಯಾ, ಯೆಮೆನ್ ಮತ್ತು ಸುಡಾನ್ ರಾಷ್ಟ್ರಗಳ ಜನತೆಗೆ ಹೆಚ್ಚು ಅನುಕೂಲವಾಗಲಿದೆ.
ತಾತ್ಕಾಲಿಕ ಸಂರಕ್ಷಿತ ಸ್ಥಿತಿ (ಟಿಪಿಎಸ್) ಹುದ್ದೆಗಳನ್ನು ಹೊಂದಿರುವ ನಾಲ್ಕು ದೇಶಗಳ ಜನರ ಮೇಲೂ ಪರಿಣಾಮ ಬೀರಿದೆ. ಯುದ್ಧ, ನೈಸರ್ಗಿಕ ವಿಪತ್ತು ಅಥವಾ ಇತರೆ ಬಿಕ್ಕಟ್ಟುಗಳಿಂದ ಬಳಲುತ್ತಿರುವ ದೇಶಗಳ ಜನರು ಗಡಿಪಾರಾದಾಗ ಟಿಪಿಎಸ್ ರಕ್ಷಣೆ ನೀಡುತ್ತದೆ.
ಇರಾನ್, ಲಿಬಿಯಾ, ಸೊಮಾಲಿಯಾ, ಸಿರಿಯಾ, ಯೆಮೆನ್, ವೆನೆಜುವೆಲಾ, ಉತ್ತರ ಕೊರಿಯಾ, ನೈಜೀರಿಯಾ, ಮ್ಯಾನ್ಮಾರ್, ಎರಿಟ್ರಿಯಾ, ಕಿರ್ಗಿಸ್ತಾನ್, ಸುಡಾನ್ ಮತ್ತು ಟಾಂಜಾನಿಯಾ ದೇಶಗಳಿಗೆ ಪ್ರಯಾಣ ನಿರ್ಬಂಧಗಳಿಂದ ಮುಕ್ತಿ ಸಿಗಲಿದೆ. ಉನ್ನತ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಕೂಡ ಈ ನಿರ್ಬಂಧದ ರದ್ಧತಿ ಅನುಕೂಲಕರವಾಗಿದೆ.
ಟೈಮ್ ನಿಯತಕಾಲಿಕೆ (ಟೈಮ್ ಮಾಗ್ಸೈನ್) ಪ್ರಕಾರ, ಅಕ್ಟೋಬರ್ 1, 2015 ಮತ್ತು ಸೆಪ್ಟೆಂಬರ್ 30, 2019ರ ನಡುವೆ ಇರಾನಿಯನ್ನರಿಗೆ ನೀಡಲಾದ ವೀಸಾಗಳಲ್ಲಿ 79%, ಸೊಮಾಲಿಗಳಿಗೆ 74% ಮತ್ತು ಯೆಮೆನ್‌ಗಳಿಗೆ 66% ರಷ್ಟು ಇಳಿಕೆ ಕಂಡು ಬಂದಿದೆ.
ಟ್ರಂಪ್ ಅವರ ವೀಸಾ ರದ್ಧತಿಯ ಬಳಿಕ ಪೋಷಕರನ್ನು ಸೇರಲಾಗದೆ ಯೆಮನ್ ಮೂಲದ ಇಬ್ಬರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಜತೆಗೆ ಟ್ರಂಪ್ ತೆಗೆದುಕೊಂಡ ಕೆಲ ನಿರ್ಧಾರಗಳಿಂದ ವರ್ಣಬೇಧ ನೀತಿ ಹೆಚ್ಚಾಗಿದ್ದು, ಗಲಭೆಗಳು ಹೆಚ್ಚುತ್ತಿವೆ. ಜನಾಂಗೀಯ ದ್ವೇಷಕ್ಕೂ ಕಾರಣವಾಗಿ, ಹತ್ತಾರು ಹತ್ಯೆಗಳು ನಡೆದಿವೆ.