ವಾಷಿಂಗ್ಟನ್: ಸಿಎಎ ಹಾಗೂ ಎನ್ಆರ್ಸಿ ಕುರಿತಂತೆ ಮೈಕ್ರೋಸಾಫ್ಟ್ ಸಿಇಒ ಹಾಗೂ ಎನ್ಆರ್ಐ ಸತ್ಯ ನಾದೆಳ್ಲ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.
ಈ ಮೂಲಕ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದ್ದಾರೆ. ಭಾರತಕ್ಕೆ ಬರುವ ಪ್ರತಿಯೊಬ್ಬ ವಲಸಿಗನಿಗೂ ಭಾರತೀಯ ಸಲವತ್ತುಗಳು, ಉಪಯೋಗಗಳು ಸಮಾನವಾಗಿ ದೊರೆಯಬೇಕು ಎಂದು ಪ್ರತಿಪಾದಿಸಿದ್ದಾರೆ.
ಕಾನೂನಿನಲ್ಲಿ ಇರುವಂತೆ ಕೇವಲ ಹಿಂದೂ, ಕ್ರೈಸ್ತ, ಪಾರ್ಷಿ, ಜೈನ್, ಬೌದ್ಧ ಅಷ್ಟೇ ಅಲ್ಲ ಮುಸ್ಲಿಂ ವಲಸಿಗರಿಗೂ ಸಮಾನ ಸವಲತ್ತುಗಳು ದೊರೆಯಬೇಕು ಎಂಬುದು ನಾದೆಳ್ಲ ಅಭಿಪ್ರಾಯವಾಗಿದೆ. ಇದೇ ವೇಳೆ ಪ್ರತಿ ರಾಷ್ಟ್ರವೂ ತನ್ನ ದೇಶದ ಗಡಿ, ದೇಶದ ಆಂತರಿಕ, ಬಾಹ್ಯ ಭದ್ರತೆ ಹಾಗೂ ತನ್ನದೇ ಆದ ವಲಸಿಗ ನೀತಿಯನ್ನ ಹೊಂದಿರಬೇಕಾಗಿದ್ದು, ಅದು ಕರ್ತವ್ಯವೂ ಹೌದು. ಇದೇ ವೇಳೆ ಒಂದು ಪ್ರಜಾಪ್ರಭುತ್ವ ರಾಷ್ಟ್ರ ತನ್ನದೇ ಆದ ಇತಿಮಿತಿಗಳ ಒಳಗೆ ಕಾನೂನು ರಚಿಸುವುದು ಅದರ ಸಾರ್ವಬೌಮ ಅಧಿಕಾರವೂ ಹೌದು ಎಂದು ಪ್ರತಿಪಾದನೆ ಮಾಡಿದ್ದಾರೆ.
ಅಮೆರಿಕದಲ್ಲಿ ತಾವು ಭಾರತೀಯ ಪರಂಪರೆ, ಸಾಂಸ್ಕೃತಿಕ ಸಾಮರಸ್ಯ ಕಾಪಾಡಲು ಸಾಧ್ಯವಾಗಿದೆ. ಇದೇ ರೀತಿ ಭಾರತದಲ್ಲೂ ಆ ಸಾಮರಸ್ಯ ಇರಬೇಕು ಎಂದು ಬಯಸುತ್ತೇನೆ. ಮತ್ತು ಈ ಮೂಲಕ ಅಭಿವೃದ್ಧಿಗೆ ಸಹಕಾರಿಯಾಗುವಂತಿರಬೇಕು ಎಂಬ ಆಶಯ ಹೊಂದಿದ್ದೇನೆ ಎಂದು ಹೇಳಿದ್ದಾರೆ.