ಸ್ಯಾನ್ ಫ್ರಾನ್ಸಿಸ್ಕೋ: ವಿದ್ಯಾರ್ಥಿಗಳು ಪುಸ್ತಕಗಳನ್ನು ಓದಬೇಕು, ಸಹಾಯ ಮಾಡುವುದನ್ನು ಕಲಿಯಬೇಕು ಎಂದು ಜಗತ್ತಿನ ನಂಬರ್ ಶ್ರೀಮಂತ ಉದ್ಯಮಿ, ಟೆಸ್ಲಾ ಹಾಗೂ ಸ್ಪೇಸ್‌ಎಕ್ಸ್ ಸಿಇಒ ಎಲಾನ್ ಮಸ್ಕ್ ಹಲವು ಸಲಹೆಗಳನ್ನು ನೀಡಿದ್ದಾರೆ.
ಕೃತಕ ಬುದ್ಧಿಮತ್ತೆಯ ಸಂಶೋಧಕ ಲೆಕ್ಸ್ ಫ್ರಿಡ್‌ಮನ್ ಅವರೊಂದಿಗಿನ ಸಂದರ್ಶನದಲ್ಲಿ ಎಲಾನ್ ಮಸ್ಕ್ ಭಾಗವಹಿಸಿದ್ದರು. ಈ ವೇಳೆ, ದೊಡ್ಡದನ್ನು ಮಾಡಲು ಬಯಸುವ ಯುವಕರಿಗೆ ನೀವು ಏನು ಸಲಹೆ ನೀಡುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಉಪಯುಕ್ತರಾಗಲು ಪ್ರಯತ್ನಿಸಿ ಎಂದಿದ್ದಾರೆ.
ಯುವ ಪೀಳಿಗೆ, ಮಾನವರಿಗೆ ಮತ್ತು ಜಗತ್ತಿಗೆ ಉಪಯುಕ್ತವಾಗುವ ಕೆಲಸಗಳನ್ನು ಮಾಡಬೇಕು. ತಮ್ಮನ್ನು ತಾವು ಉಪಯುಕ್ತರಾಗುವಂತೆ ಮಾಡಿಕೊಳ್ಳಲುವುದು ತುಂಬಾ ಕಷ್ಟವಾದರೂ ನೀವು ಸೇವಿಸುವುದಕ್ಕಿಂತ ಹೆಚ್ಚಿನದನ್ನು ಕೊಡುಗೆ ನೀಡಲು ಪ್ರಯತ್ನಿಸಿ ಎಂದು ಯುವಜನತೆಗೆ ಕಿವಿ ಮಾತು ಹೇಳಿದ್ದಾರೆ.
ಸಾಮಾನ್ಯ ಜ್ಞಾನದ ಬಗ್ಗೆ ಲಕ್ಷ್ಯ ವಹಿಸಿ
ಸಾಮಾನ್ಯ ಜ್ಞಾನದ ಬಗ್ಗೆ ಓದಿದರೆ ಪ್ರಪಂಚದಾದ್ಯಂತ ಏನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಪ್ರಪಂಚದಾದ್ಯಂತದ ವಿವಿಧ ರೀತಿಯ ಜನರೊಂದಿಗೆ ನೀವು ಹೆಚ್ಚು ಮಾತನಾಡುತ್ತೀರಿ. ನಿಮ್ಮ ಮನಸ್ಸು ಹೆಚ್ಚು ತೆರೆದುಕೊಳ್ಳುತ್ತದೆ ಎಂದು ಮಸ್ಕ್ ಯುವಕರಿಗೆ ಸಲಹೆ ನೀಡಿದ್ದಾರೆ.
ಜೀವನದ ವಿವಿಧ ಹಂತಗಳು, ವಿಭಿನ್ನ ಕೈಗಾರಿಕೆಗಳು, ವೃತ್ತಿಗಳು ಹಾಗೂ ಕೌಶಲ್ಯ ಇರುವ ಜನರೊಂದಿಗೆ ಮಾತನಾಡಿ ಎಂದು ಎಲಾನ್ ಮಸ್ಕ್ ಫ್ರಿಡ್ಮನ್ಗೆ ತಿಳಿಸಿದ್ದಾರೆ. ಕಾಲೇಜು ಪದವಿಯನ್ನು ಹೊಂದುವ ಅಗತ್ಯವಿಲ್ಲ ಅಥವಾ ಪ್ರೌಢಶಾಲೆಯೂ ಸಹ ಅಗತ್ಯವಿಲ್ಲ ಎಂದು 2014ರಲ್ಲಿ ಮಸ್ಕ್ ಜರ್ಮನ್ ಆಟೋಮೋಟಿವ್ ಪಬ್ಲಿಕೇಶನ್ ಆಟೋ ಬಿಲ್ಡ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.
ಯಾರಾದರೂ ಶ್ರೇಷ್ಠ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದರೆ ಅವರು ಉತ್ತಮ ವಿಷಯಗಳಲ್ಲಿ ಸಮರ್ಥರಾಗುತ್ತಾರೆ ಎಂಬುದರ ಸೂಚನೆಯಾಗಿರಬಹುದು. ಆದರೆ, ಇದು ಅಗತ್ಯವಲ್ಲ ಎಂದಿದ್ದರು. ಬಿಲ್ ಗೇಟ್ಸ್ ಅಥವಾ ಲ್ಯಾರಿ ಎಲಿಸನ್, ಸ್ಟೀವ್ ಜಾಬ್ಸ್ ಅವರಂತಹ ಜನರನ್ನು ನೋಡಿ ಇವರು ಕಾಲೇಜಿನಿಂದ ಪದವಿ ಪಡೆದಿಲ್ಲ ಎಂಬ ಉದಾಹರಣೆ ಕೊಟ್ಟಿದ್ದರು.
ಇದನ್ನೂ ಓದಿ: 2022ರಲ್ಲಿ ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿ ಕೋಟಿ ಕೋಟಿ ಹಣ ಗಳಿಸೋಕೆ ಅತ್ಯುತ್ತಮ ಮಾರ್ಗಗಳಿವು!