ಕ್ಯಾಲಿಫೋರ್ನಿಯಾ: ಸಾಂಕ್ರಾಮಿಕ ರೋಗ ಕೊರೊನಾ ವೈರಸ್ನ ದೀರ್ಘಕಾಲದ ಅಡ್ಡ ಪರಿಣಾಮ ಹಿನ್ನೆಲೆ ಯುನೈಟೆಡ್ ಸ್ಟೇಟ್ಸ್ನಲ್ಲಿ 28,000 ಥೀಮ್ ಪಾರ್ಕ್ ಉದ್ಯೋಗಗಳನ್ನು ವಜಾಗೊಳಿಸುವುದಾಗಿ ಮನರಂಜನಾ ದೈತ್ಯ ಕಂಪನಿ ಡಿಸ್ನಿ ಮಂಗಳವಾರ ಪ್ರಕಟಿಸಿದೆ.
"ಈ ಕ್ರಮವನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ. ನಮ್ಮ ವ್ಯವಹಾರದ ಆರ್ಥಿಕತೆ ಮೇಲೆ ಕೋವಿಡ್ -19 ದೀರ್ಘಕಾಲದಿಂದ ಪ್ರಭಾವ ಬೀರುತ್ತಲೇ ಇದೆ. ದೈಹಿಕ ಅಂತರದ ಅವಶ್ಯಕತೆಗಳು ಮತ್ತು ಸಾಂಕ್ರಾಮಿಕ ಅವಧಿಯ ಬಗ್ಗೆ ನಿರಂತರ ಅನಿಶ್ಚಿತತೆಯಿಂದಾಗಿ ಸೀಮಿತ ಸಾಮರ್ಥ್ಯ ಇರುವುದರಿಂದ ಉದ್ಯೋಗಗಳ ಕಡಿತಕ್ಕೆ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ. 28,000 ಥೀಮ್ ಪಾರ್ಕ್ ಉದ್ಯೋಗಗಳು ಅಥವಾ ನಾಲ್ಕನೇ ಒಂದು ಭಾಗದಷ್ಟು ಉದ್ಯೋಗಿಗಳನ್ನು ಕಡಿತಗೊಳಿಸುವುದಾಗಿ ಎಂದು ಡಿಸ್ನಿ ಪಾರ್ಕ್ಸ್‌ನ ಅಧ್ಯಕ್ಷ ಜೋಶ್ ಡಿ'ಅಮರೊ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಕೊರೊನಾ ವೈರಸ್ ಹರಡುವ ಮೊದಲು ಕ್ಯಾಲಿಫೋರ್ನಿಯಾ ಮತ್ತು ಫ್ಲೋರಿಡಾದಲ್ಲಿರುವ ಡಿಸ್ನಿ ಥೀಮ್ ಪಾರ್ಕ್‌ಗಳಲ್ಲಿ ಸುಮಾರು 1,10,000 ಉದ್ಯೋಗಿಗಳನ್ನು ಬಳಸಿಕೊಂಡಿತು. ಸಾಂಕ್ರಾಮಿಕ ರೋಗದ ಬಳಿಕ ಘೋಷಿಸಲಾದ ಉದ್ಯೋಗ ಕಡಿತದ ನಂತರ ಸುಮಾರು 82,000ಕ್ಕೆ ಇಳಿಸಲಾಗುತ್ತಿದೆ.
ಜುಲೈ ಮಧ್ಯದಲ್ಲಿ ಫ್ಲೋರಿಡಾದ ವಾಲ್ಟ್ ಡಿಸ್ನಿ ವರ್ಲ್ಡ್ ಮತ್ತೆ ತೆರೆಯಲ್ಪಟ್ಟಿತು. ಆದ್ರೆ, ಕೊರೊನಾ ವೈರಸ್ನಿಂದಾಗಿ ಜನರು ಥೀಮ್ ಪಾರ್ಕ್ ಆಗಮಿಸುವಲ್ಲಿ ಹಿಂದೇಟು ಹಾಕಿದರು. ಹೀಗಾಗಿ ಆರ್ಥಿಕತೆ ಮತ್ತೆ ಕುಂಠಿತವಾಗಿ ಸಾಗಿತು. ಹೀಗಾಗಿ ಉದ್ಯೋಗಗಳನ್ನು ಕಡಿತಗೊಳಿಸುವ ಸಂದರ್ಭ ಬಂದೊದಗಿದೆ ಎಂದು ಕಂಪನಿ ತಿಳಿಸಿದೆ.
ಅಮೆರಿಕದಲ್ಲಿ ಕೊರೊನಾ ಪ್ರಕರಣಗಳು 71,80,411 ದಾಟಿದ್ದು, ಇದರಲ್ಲಿ ಸುಮಾರು 2,05,774 ಸಾವುಗಳು ಸಂಭವಿಸಿವೆ.