ಹವಾನಾ : ಇಡೀ ವಿಶ್ವವನ್ನು ತಲ್ಲಣಗೊಳಿಸಿರುವ ಕೋವಿಡ್, ಹಲವು ರೂಪಾಂತರಿಗಳ ಮೂಲಕ ಜನರನ್ನ ಹಿಂಡಿ ಹಿಪ್ಪೆ ಮಾಡುತ್ತಿದೆ. ಆರ್ಥಿಕವಾಗಿ ಹಲವಾರು ದೇಶಗಳನ್ನು ಪಾತಾಳಕ್ಕೆ ಕುಸಿಯುವಂತೆ ಮಾಡಿರುವ ವೈರಸ್, ಅದೆಷ್ಟೋ ಬಡ ರಾಷ್ಟ್ರಗಳಲ್ಲಿ ಒಪ್ಪೊತ್ತಿನ ಊಟಕ್ಕೂ ಪರದಾಡುವಂತೆ ಮಾಡಿದೆ. ಇತ್ತ ಕ್ಯೂಬಾದಲ್ಲಿ ಬೆಲೆ ಏರಿಕೆ ಹಾಗೂ ಆಹಾರ ಕೊರತೆ ಖಂಡಿಸಿ ಸಾವಿರಾರು ಮಂದಿ ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ.
ಕ್ಯೂಬಾದ ರಾಜಧಾನಿ ಹವಾನಾದಲ್ಲಿ ನಿನ್ನೆ ಯುವ ಜನತೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಇದರಿಂದ ಅಲ್ಲಿನ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿ, ಕೆಲ ಗಂಟೆಗಳ ಕಾಲ ಸವಾರರು ರಸ್ತೆಯಲ್ಲೇ ಕಾಲ ಕಳೆಯುವಂತಾಯಿತು. ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಕೆಲ ಪ್ರತಿಭಟನಾಕಾರರು ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಿ ಆಕ್ರೋಶವನ್ನು ಹೊರ ಹಾಕಿದರು.
ಸ್ವಾತಂತ್ರ್ಯ...ಸಾಕು... ಒಟ್ಟಾಗೋಣ ಎಂಬ ಘೋಷಣೆ ಕೂಗಿದ್ದಾರೆ. ಈ ವೇಳೆ ಬೈಕ್ ಸವಾರನೆೋರ್ವ ಅಮೆರಿಕದ ಧ್ವಜವನ್ನು ಹೊರ ತೆಗೆಯುತ್ತಿದ್ದಂತೆ ಅದನ್ನು ಇತರರು ಕಸಿದುಕೊಂಡರು.
ಸಾಲುಗಳು, ಕೊರತೆಗಳಿಂದ ಬೇಸರಗೊಂಡಿದ್ದೇವೆ. ಅದಕ್ಕಾಗಿಯೇ ಇಂದು ಇಲ್ಲಿದ್ದೇನೆ ಎಂದು ಪ್ರತಿಭಟನಾ ನಿರತರೊಬ್ಬರು ಪ್ರತಿಕ್ರಿಯಿಸಿದರು. ಪೊಲೀಸರು ಬಂಧಿಸುವ ಭಯದಿಂದ ತನ್ನನ್ನು ಗುರುತಿಸಿಕೊಳ್ಳಲು ಆತ ನಿರಾಕರಿಸಿದ.
ಕ್ಯೂಬಾದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಕಳೆದೊಂದು ದಶಕದಲ್ಲೇ ಅತ್ಯಂತ ಕೆಟ್ಟ ಆರ್ಥಿಕ ಪರಿಸ್ಥಿತಿಗೆ ತಲುಪಿದೆ. ಅಮೆರಿಕದ ಹಿಂದಿನ ಅಧ್ಯಕ್ಷ ಟ್ರಂಪ್ ಆಡಳಿತ ಹೇರಿದ್ದ ನಿರ್ಬಂಧಗಳ ಪರಿಣಾಮಗಳಿಂದಾಗಿ ಇಂತಹ ಸ್ಥಿತಿಯನ್ನು ಅನುಭವಿಸಲಾಗುತ್ತಿದೆ. ಕ್ಯೂಬಾ ಜನರು ನಿನ್ನೆ ನಡೆಸಿದ ಪ್ರತಿಭಟನೆಗೆ ಬೈಡನ್ ಸರ್ಕಾರ ಬೆಂಬಲ ಘೋಷಿಸಿದೆ.