ವಾಷಿಂಗ್ಟನ್: ಅಮೆರಿಕದಲ್ಲಿ ಮಾರಕ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ ಮಂಗಳವಾರ 25 ಸಾವಿರ ದಾಟಿದ್ದು, ಒಂದೇ ದಿನದಲ್ಲಿ 2,129 ಜನ ಸಾವಿಗೀಡಾಗಿದ್ದಾರೆ.
ಮಂಗಳವಾರದ ವರೆಗೆ 6 ಲಕ್ಷದ 5 ಸಾವಿರಕ್ಕೂ ಹೆಚ್ಚು ಅಮೆರಿಕನ್ನರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಹೇಳಿದೆ. ಒಂದೇ ದಿನದಲ್ಲಿ 2,129 ಅಮೆರಿಕನ್ನರು ಸಾವನ್ನಪ್ಪಿದ್ದಾರೆ. ಈ ಹಿಂದೆ ಏಪ್ರಿಲ್ 10 ರಂದು 2,074 ಜನ ಸಾವಿಗೀಡಾಗಿದ್ದರು. ನ್ಯೂಯಾರ್ಕ್ ಕೊರೊನಾ ಸೋಂಕಿನ ಕೇಂದ್ರ ಬಿಂದುವಾಗಿದೆ. ಇಲ್ಲಿ 2,03,020 ಜನರಲ್ಲಿ ಸೋಂಕು ಕಂಡುಬಂದಿದ್ದು, 10,842 ಜನ ಕೊನೆಯುಸಿರೆಳೆದಿದ್ದಾರೆ.
ಒಟ್ಟಾರೆಯಾಗಿ, 25,981 ಕ್ಕೂ ಹೆಚ್ಚು ಅಮೆರಿಕನ್ನರು ಮಾರಣಾಂತಿಕ ವೈರಸ್‌ನಿಂದ ಸಾವನ್ನಪ್ಪಿದ್ದಾರೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.
ಕೊರೊನಾ ವೈರಸ್ ವಿರುದ್ಧದ ನಮ್ಮ ಯುದ್ಧದಲ್ಲಿ ಅಮೆರಿಕ ಗಣನೀಯ ಪ್ರಗತಿಯನ್ನು ಸಾಧಿಸುತ್ತಿದೆ. ಅದೃಶ್ಯವಾಗಿರುವ ಶತ್ರುವಿನಿಂದ ಕಳೆದುಹೋದ ಪ್ರತಿಯೊಂದು ಅಮೂಲ್ಯ ಜೀವಗಳಿಗೆ ನಾವು ದುಃಖಿಸುತ್ತೇವೆ. ಕತ್ತಲೆಯ ಮೂಲಕ ನಾವು ಬೆಳಕಿನ ಕಿರಣಗಳನ್ನು ನೋಡಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.