ಹೈದರಾಬಾದ್ : ಕೋವಿಡ್-19 ನಿಯಂತ್ರಿಸುವ ಅಮೆರಿಕದ ಉನ್ನತ ಮಟ್ಟದ ಬಲವಾದ ಆಶ್ವಾಸನೆಗಳ ಹೊರತಾಗಿಯೂ ಅಲ್ಲಿಯೇ ಗಗನಕ್ಕೇರಿರುವ ಸಾವು-ನೋವುಗಳು ಮತ್ತು ಸೋಂಕುಗಳ ಹರಡುವಿಕೆ ಸಾಂಕ್ರಾಮಿಕ ರೋಗ ನಿಭಾಯಿಸುವ ದೇಶದ ದುರ್ಬಲ ತಂತ್ರಗಳನ್ನು ಬಹಿರಂಗಪಡಿಸಿವೆ.
ಕೊರೊನಾ ವೈರಸ್ ಮೂಲದ ನಗರವಾದ ವುಹಾನ್‌ನಿಂದ ದೂರದಲ್ಲಿರುವ ವಿಶ್ವ ದೈತ್ಯ ಅಮೆರಿಕ, ಕೊರೊನಾ ಪರಿಣಾಮದಲ್ಲಿ ಚೀನಾ ಮೀರಿಸಿದೆ ಮತ್ತು ಅತಿ ಹೆಚ್ಚು ಸಾವುಗಳನ್ನು (6,088) ಮತ್ತು ಸೋಂಕುಗಳನ್ನು (2,45,184) ದಾಖಲಿಸಿದೆ. ಸಂಪರ್ಕ ಪತ್ತೆಹಚ್ಚುವಿಕೆ, ಜನರನ್ನು ಪರೀಕ್ಷಿಸುವುದು ಮುಂತಾದ ಆರಂಭಿಕ ಕ್ರಮಗಳನ್ನು ನಿರ್ಲಕ್ಷಿಸುವುದರಿಂದ ಈಗ ವೈರಸ್ ಹರಡುವುದನ್ನು ತಡೆಯಲು ರಾಷ್ಟ್ರವು ತೀವ್ರವಾಗಿ ಹೋರಾಡುತ್ತಿದೆ.
ದಕ್ಷಿಣ ಕೊರಿಯಾ ಮಾಡಿದಂತೆ ವೈರಸ್ ಹರಡುವಿಕೆಯ ಆರಂಭಿಕ ಹಂತದಲ್ಲಿ ಬೃಹತ್ ಪರೀಕ್ಷೆಗಳನ್ನು ನಡೆಸುವುದು ಅದರ ಹರಡುವಿಕೆ ತಡೆಯುವ ನಿರ್ಣಾಯಕ ಕ್ರಮ. ಅಮೆರಿಕಾದಲ್ಲಿ ಕೊರೊನ ವೈರಸ್ ಹರಡಲು ಪ್ರಾರಂಭಿಸಿದಾಗ, ಆಡಳಿತವು ಸಾಕಷ್ಟು ಪರೀಕ್ಷೆಗಳನ್ನು ನಡೆಸಲು ವಿಫಲವಾಯಿತು ಮತ್ತು ಅದು ತೀವ್ರವಾಗುವ ಹೊತ್ತಿಗೆ ಸಮುದಾಯಗಳಲ್ಲಿ ವೈರಸ್ ಸ್ಫೋಟಗೊಂಡಿತು.
ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ದತ್ತಾಂಶಗಳ ಪ್ರಕಾರ, ಫೆಬ್ರವರಿ ತಿಂಗಳಿನ ಸರ್ಕಾರಿ ಲ್ಯಾಬ್‌ಗಳು ಕೇವಲ 352 ಕೋವಿಡ್-19 ಪರೀಕ್ಷೆಗಳನ್ನು ಮಾತ್ರ ಪ್ರಕ್ರಿಯೆಗೊಳಿಸಿದ್ದವು. ಅಂದರೆ ದಿನಕ್ಕೆ ಸರಾಸರಿ ಕೇವಲ ಒಂದು ಡಜನ್ ಪರೀಕ್ಷೆಗಳು. ವೈರಸ್ ಈಗಾಗಲೇ ಅಮೆರಿಕದ ಹೆಚ್ಚಿನ ಭಾಗಗಳಲ್ಲಿ ನೆಲೆಯೂರಿದೆ ಎಂಬ ಅಂಶವನ್ನು ಪರಿಗಣಿಸಿದರೆ ಇದೊಂದು ವಿಸ್ಮಯಕಾರಿ ಆಘಾತಕಾರಿ ಸಂಗತಿ.
ಮಾರ್ಚ್ ಆರಂಭದಲ್ಲಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕನ್ನರಿಗೆ ಸಿಡಿಸಿ ಅಭಿವೃದ್ಧಿಪಡಿಸಿದ ಕೋವಿಡ್-19 ಪರೀಕ್ಷೆಯು “ಪರಿಪೂರ್ಣ” ಮತ್ತು “ಪರೀಕ್ಷೆಯನ್ನು ಬಯಸುವ ಯಾರಾದರೂ ಪರೀಕ್ಷೆ ಮಾಡಿಸಿಕೊಳ್ಳಬಹುದು’ ಎಂದು ಭರವಸೆ ನೀಡಿದರು.
ಸಾಂಕ್ರಾಮಿಕ ರೋಗವನ್ನು ಸೋಲಿಸುವಲ್ಲಿ ವಾಷಿಂಗ್ಟನ್ ಮಾಡಿರುವ ಬೃಹತ್ ಪರೀಕ್ಷಾ ಪ್ರಮಾದಗಳು ಆ ದೇಶವನ್ನು ದುರ್ಬಲಗೊಳಿಸಿದೆ. ಪರಿಸ್ಥಿತಿಯ ನೇರ ಜ್ಞಾನ ಹೊಂದಿರುವ ಇಬ್ಬರು ಫೆಡರಲ್ ಆರೋಗ್ಯ ಅಧಿಕಾರಿಗಳು, ಅನೇಕ ಏಜೆನ್ಸಿಯ ಪರೀಕ್ಷಾ ಕಿಟ್‌ಗಳು ವೈರಸ್‌ನ ವಿಶ್ವಾಸಾರ್ಹವಾಗಿ ಕಂಡುಹಿಡಿಯಲು ಏಕೆ ವಿಫಲವಾಗಿವೆ ಎಂದು ಸಿಡಿಸಿ ತಜ್ಞರಿಗೂ ತಿಳಿದಿಲ್ಲ ಎಂದು ಹೇಳಿದ್ದಾರೆ.
ಸೋಂಕಿತರನ್ನು ಗುರುತಿಸುವಲ್ಲಿ, ಅವರ ಸಂಪರ್ಕಗಳ ಇತಿಹಾಸವನ್ನು ಪತ್ತೆಹಚ್ಚುವಲ್ಲಿ ಮತ್ತು ಸಮುದಾಯಕ್ಕೆ ವ್ಯಾಪಕವಾದ ಅಪಾಯ ತಗ್ಗಿಸುವಲ್ಲಿ 3,600ಕ್ಕೂ ಹೆಚ್ಚು ರೋಗ ಪತ್ತೆದಾರರಿಗೆ ತರಬೇತಿ ನೀಡಿದ್ದರೂ ಸಹ ಸಂಪರ್ಕ ಪತ್ತೆಹಚ್ಚುವಲ್ಲಿ ಯುಎಸ್ ವಿಫಲವಾಗಿದೆ. ತಜ್ಞರು ತಮ್ಮ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದರೂ, ಆರಂಭಿಕ ಪರೀಕ್ಷೆಯ ವೈಫಲ್ಯಗಳಿಂದಾಗಿ ಅವರಿಗೆ ಉದ್ದೇಶಿತ ಫಲಿತಾಂಶ ತಲುಪಲು ಸಾಧ್ಯವಾಗುತ್ತಿಲ್ಲ.
ಟ್ರಂಪ್, ಈ ಬಿಕ್ಕಟ್ಟಿನ ಬಗ್ಗೆ ತಮ್ಮ ಆಡಳಿತದ ಪ್ರತಿಕ್ರಿಯೆಯನ್ನು ಪರಿಪೂರ್ಣ 10 ಎಂದು ರೇಟ್ ಮಾಡಿದ್ದಾರೆ. ಆದಾಗ್ಯೂ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಲರ್ಜಿ ಮತ್ತು ಸಾಂಕ್ರಾಮಿಕ ರೋಗಗಳ ನಿರ್ದೇಶಕ ಡಾ. ಆಂಥೋನಿ ಫೌಸಿ, ಸಿಡಿಸಿಯ ವ್ಯವಸ್ಥೆಯು ಕೊರೊನಾ ಪತ್ತೆಯಲ್ಲಿ ವಿಫಲವಾಗಿದೆ. ಏಕಾಏಕಿ ವೈರಸ್ ಪತ್ತೆಹಚ್ಚಲು ಇದನ್ನು ವಿನ್ಯಾಸಗೊಳಿಸಲಾಗಿಲ್ಲ ಎಂದು ಅವರು ಹೇಳಿದ್ದಾರೆ.
ಸಿಡಿಸಿ ಒಳಗೊಂಡ ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆ ತನ್ನದೇ ಆದ ತಪ್ಪುಗಳನ್ನು ನಿರ್ಣಯಿಸಲು ಆಂತರಿಕ ವಿಮರ್ಶೆ ಪ್ರಾರಂಭಿಸಿದೆ. ಆದರೆ, ಹೊರಗಿನ ವೀಕ್ಷಕರು ಮತ್ತು ಫೆಡರಲ್ ಆರೋಗ್ಯ ಅಧಿಕಾರಿಗಳು ರಾಷ್ಟ್ರೀಯ ಪ್ರತಿಕ್ರಿಯೆಗೆ ಅಡ್ಡಿಯುಂಟುಮಾಡುವ ನಾಲ್ಕು ಪ್ರಾಥಮಿಕ ವಿಷಯಗಳನ್ನು ಬೊಟ್ಟು ಮಾಡಿ ತೋರಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಅಳವಡಿಸಿಕೊಂಡ ಪರೀಕ್ಷೆಯನ್ನು ಬಳಸದಿರಲು ಮುಂಚಿನ ನಿರ್ಧಾರ, ಸಿಡಿಸಿ ಅಭಿವೃದ್ಧಿಪಡಿಸಿದ ಹೆಚ್ಚು ಸಂಕೀರ್ಣ ಪರೀಕ್ಷೆಯ ನ್ಯೂನತೆಗಳು, ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಲು ಖಾಸಗಿ ವಲಯವನ್ನು ತೊಡಗಿಸಿಕೊಳ್ಳುವಲ್ಲಿ ವಿಳಂಬವಾಗಿರುವುದು, ಯಾರು ಪರೀಕ್ಷೆಗೆ ಒಳಪಡಬೇಕು ಎಂಬ ವಿಷಯದಲ್ಲಿ ಸರ್ಕಾರದ ವಿಳಂಬ ನಿರ್ಧಾರ ಅಮೆರಿಕದಲ್ಲಿ ಕೊರೊನಾ ನಿಯಂತ್ರಣ ವೈಫಲ್ಯಕ್ಕೆ ಕಾರಣ ಎಂದಿದ್ದಾರೆ.
ಸಾಂಕ್ರಾಮಿಕ ಮತ್ತು ವ್ಯಾಪಕವಾಗಿ ಹರಡುವ ವೈರಸ್ ಎದುರಿಸಲು ಪರದಾಡುತ್ತಿರುವ ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರವು ಮತ್ತೊಮ್ಮೆ “ಸರ್ವಶಕ್ತ” ವಾಗಿದೆ ಎಂದು ಪುನರುಚ್ಚರಿಸುವುದು ಕಷ್ಟದಾಯಕವಾಗಿದೆ.