ಇಲಿನಾಯ್ಸ್(ಅಮೆರಿಕ): ಕೊರೊನಾ ಸೋಂಕಿನಿಂದ ತತ್ತರಿಸಿರುವ ಅಮೆರಿಕದಲ್ಲಿ ಶಿಶುವೊಂದು ಕೋವಿಡ್-19ಗೆ ಬಲಿಯಾಗಿದೆ ಎಂದು ಇಲಿನಾಯ್ಸ್ ಆರೊಗ್ಯ ಇಲಾಖೆ ತಿಳಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಇಲಿನಾಯ್ಸ್ ಗವರ್ನರ್ ಜೆ.ಬಿ.ಪ್ರಿಟ್ಜ್ಕರ್, ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವಿಗೆ ಇತರೆ ಆರೋಗ್ಯದ ಸಮಸ್ಯೆ ಇತ್ತೇ? ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲಾಗುತ್ತಿದೆ. ಇಲ್ಲಿಯವರೆಗೂ ನೀವು ಈ ಮಾರಕ ಸೋಂಕಿನ ಬಗ್ಗೆ ಗಮನ ಹರಿಸದಿದ್ದರೆ, ಇದು ನಿಮಗೆ ಎಚ್ಚರಿಕೆಯ ಕರೆಗಂಟೆ ಎಂದಿದ್ದಾರೆ.
ನಮ್ಮನ್ನು ರಕ್ಷಿಸಿಕೊಳ್ಳಲು ಮಾತ್ರವಲ್ಲ, ನಮ್ಮ ಸುತ್ತಮುತ್ತಲಿನವರ ಪ್ರಾಣ ರಕ್ಷಣೆಗಾಗಿಯೂ ನಾವು ಎಲ್ಲಾ ಮುಂಜಾಗರೂಕತಾ ಪ್ರಯತ್ನಗಳನ್ನು ಮಾಡಬೇಕು ಅನ್ನೋದು ಅವರ ಸಲಹೆ.
ಮಕ್ಕಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಪ್ರಕರಣಗಳು ವಿರಳ. ವಿಶ್ವದಾದ್ಯಂತ ಅಲ್ಲೊಂದು, ಇಲ್ಲೊಂದು ಈ ರೀತಿಯ ಸೋಂಕು ತಗುಲಿದ ಪ್ರಕರಣಗಳು ವರದಿಯಾಗಿವೆ.
ಚೀನಾದ ಸಂಶೋಧಕರು ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ಪ್ರಕಟಿಸಿದ ಪತ್ರವೊಂದರಲ್ಲಿ ಕೋವಿಡ್ -19ಗೆ 10 ತಿಂಗಳ ಮಗು ಸಾವನ್ನಪ್ಪಿದೆ ಎಂಬ ವಿಚಾರವಿತ್ತು. ಈ ಶಿಶುವಿಗೆ ಕರುಳಿನ ಸಮಸ್ಯೆ ಮತ್ತು ಅಂಗಾಂಗ ವೈಫಲ್ಯವಿತ್ತು. ಹಾಗಾಗಿ ಆಸ್ಪತ್ರೆಗೆ ದಾಖಲಾದ 4 ವಾರಗಳ ನಂತರ ಸಾವನ್ನಪ್ಪಿದೆ ಎಂದು ತಿಳಿಸಲಾಗಿದೆ.
ಪೀಡಿಯಾಟ್ರಿಕ್ಸ್ ಜರ್ನಲ್ನಲ್ಲಿ ಪ್ರಕಟವಾದ ಪ್ರತ್ಯೇಕ ಸಂಶೋಧನೆಯ ಪ್ರಕಾರ, ಚೀನಾದಲ್ಲಿ 2,100 ಮಕ್ಕಳಿಗೆ ಸೋಂಕು ಕಾಣಿಸಿಕೊಂಡಿದ್ದು, 14 ವರ್ಷದೊಳಗಿನ ಒಂದು ಮಗು ಸಾವಿಗೀಡಾಗಿತ್ತು. ಸೋಂಕಿತ ಮಕ್ಕಳಲ್ಲಿ 6% ಕ್ಕಿಂತ ಕಡಿಮೆ ಮಕ್ಕಳು ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.