ಬೀಜಿಂಗ್: ವಿಶ್ವದ ಶಾಂತಿ ಮತ್ತು ಸುವ್ಯವಸ್ಥೆಗೆ ಅಮೆರಿಕ ಅತಿ ದೊಡ್ಡ ಬೆದರಿಕೆ ಎಂದು ಅಮೆರಿಕದ ವಿರುದ್ಧ ಚೀನಾದ ರಕ್ಷಣಾ ಸಚಿವಾಲಯ ಗಂಭೀರ ಆರೋಪ ಮಾಡಿದೆ.
ಸೆಪ್ಟೆಂಬರ್ 2ರಂದು ರಕ್ಷಣಾ ಇಲಾಖೆಯು ಚೀನಾ ಮಿಲಿಟರಿ ಅಭಿವೃದ್ಧಿ ಹಾಗೂ ಗುರಿಗಳು ಎಂಬ ವಾರ್ಷಿಕ ವರದಿಯನ್ನು ವಾರ್ಷಿಕ ವರದಿಯನ್ನು ಪಾರ್ಲಿಮೆಂಟ್ಗೆ ಒಪ್ಪಿಸುವ ವೇಳೆ ಅಮೆರಿಕದ ಗಂಭೀರವಾದ ನಡೆಗಳು ಹಾಗೂ ಆ ರಾಷ್ಟ್ರದ ಹಿತಾಸಕ್ತಿಗಳು ಅಂತಾರಾಷ್ಟ್ರೀಯ ಶಾಂತಿಗ ಧಕ್ಕೆ ತರುತ್ತವೆ ಎಂದು ಉಲ್ಲೇಖಿಸಿದೆ.
ಅಮೆರಿಕ ಸಾಕಷ್ಟು ವರ್ಷಗಳಿಂದ ಪ್ರಾದೇಶಿಕ ಅಶಾಂತಿಯನ್ನು ಹುಟ್ಟುಹಾಕುವುದು ಹಾಗೂ ಅಂತಾರಾಷ್ಟ್ರೀಯ ಸುವ್ಯವಸ್ಥೆಯನ್ನು ನಾಶ ಮಾಡಿ ಶಾಂತಿಗೆ ಧಕ್ಕೆ ತರುತ್ತದೆ ಎಂಬುದಕ್ಕೆ ಪುರಾವೆಗಳಿವೆ ಎಂದು ಚೀನಾ ರಕ್ಷಣಾ ಇಲಾಖೆಯ ವಕ್ತಾರ ಕರ್ನಲ್ ವು ಕಿಯಾನ್ ಆರೋಪಿದ್ದಾರೆ.
ಎರಡು ದಶಕಗಳ ಅವಧಿಯಲ್ಲಿ ಇರಾಕ್, ಸಿರಿಯಾ, ಲಿಬಿಯಾ ಮುಂತಾದ ದೇಶಗಳಲ್ಲಿ ಅಮೆರಿಕದ ನಡೆಯಿಂದಾಗಿ 8 ಲಕ್ಷಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, ಮಿಲಿಯನ್ಗಳಷ್ಟು ಮಂದಿ ವಲಸೆ ಹೋಗಿದ್ದಾರೆ ಎಂದು ಕಿಯಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತನ್ನನ್ನು ತಾನು ಬಿಂಬಿಸಿಕೊಳ್ಳುವ ಸಲುವಾಗಿ ಅಮೆರಿಕ ತಪ್ಪು ವರದಿಗಳನ್ನು ಬಿಡುಗಡೆ ಮಾಡುತ್ತಿದೆ. ಈ ವರದಿಗಳು ಚೀನಾದ ಮಿಲಿಟರಿ ವಿಚಾರವಾಗಿ ತಪ್ಪು ಸಂದೇಶವನ್ನು ಪ್ರಪಂಚಕ್ಕೆ ಹಬ್ಬಿಸುತ್ತಿದೆ ಎಂದು ಕಿಯಾನ್ ಅಭಿಪ್ರಾಯಪಟ್ಟರು.
ಇದೇ ವೇಳೆ ತಪ್ಪು ವರದಿಗಳನ್ನು ನೀಡುವುದು ಬಿಟ್ಟು ಎರಡೂ ರಾಷ್ಟ್ರಗಳ ನಡುವೆ ಆರೋಗ್ಯಕರ ಮಾತುಕತೆಗಳು ಹಾಗೂ ಉಭಯ ರಾಷ್ಟ್ರಗಳ ಮಿಲಿಟರಿ ಸಂಬಂಧಗಳ ಸುಧಾರಣೆಗೆ ಅಮೆರಿಕ ಪ್ರಯತ್ನಿಸಬೇಕೆಂದು ಈ ವೇಳೆ ಕಿಯಾನ್ ಆಗ್ರಹಿಸಿದರು.
ಸುಮಾರು 150 ಪುಟಗಳಷ್ಟು ವರದಿಯನ್ನು ಚೀನಾ ರಕ್ಷಣಾ ಸಚಿವಾಲಯ ಬಿಡುಗಡೆ ಮಾಡಿದ್ದು, ಈ ವರದಿಯಲ್ಲಿ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್ಎ)ಯ ಸಾಮರ್ಥ್ಯ, ಅದರ ತತ್ವ ಸಿದ್ಧಾಂತಗಳು, ಗುರಿ ಉದ್ಧೇಶಗಳ ಬಗ್ಗೆಯೂ ಉಲ್ಲೇಖಿಸಲಾಗಿದೆ.