ನ್ಯೂಯಾರ್ಕ್: ಕ್ಸಿನ್‌ಜಿಯಾಂಗ್‌ನ ಕಾರ್ಮಿಕರ ಶಿಬಿರಗಳಲ್ಲಿನ ಉಯಿಘರ್ ಮುಸ್ಲಿಮರ ಧರ್ಮ ಅಥವಾ ನಂಬಿಕೆಯ ಸ್ವಾತಂತ್ರ್ಯ ಹಾಗೂ ಚಳವಳಿ, ಸಂಘಟನೆ ಮತ್ತು ಅಭಿವ್ಯಕ್ತಿ ಹಾಗೂ ಸಂಸ್ಕೃತಿಯ ಸ್ವಾತಂತ್ರ್ಯಗಳ ಮೇಲೆ ತೀವ್ರ ನಿರ್ಬಂಧಗಳಿವೆ ಎಂದು ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಸಮಿತಿಯ ಸಭೆಯಲ್ಲಿ 39 ರಾಷ್ಟ್ರಗಳು ಚೀನಾ ವಿರುದ್ಧ ಆರೋಪಿಸಿದವು.
ಉಯಿಘರ್ ಮತ್ತು ಇತರ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ವ್ಯಾಪಕವಾದ ಕಣ್ಗಾವಲು ಮುಂದುವರಿಯುತ್ತಿದೆ. ಕಾರ್ಮಿಕ ಪ್ರವೃತ್ತಿಗೆ ದಬ್ಬಾಳಿಕೆಯಿಂದ ನೂಕುವುದು ಮತ್ತು ಕ್ರಿಮಿನಾಶಕ ಸೇರಿದಂತೆ ಬಲವಂತದ ಜನನ ನಿಯಂತ್ರಣದ ಕುರಿತು ಹೆಚ್ಚಿನ ವರದಿಗಳು ಹೊರಬರುತ್ತಿವೆ ಎಂದು ಸಾಮಾನ್ಯ ಸಭೆಯ ಮಾನವ ಹಕ್ಕುಗಳ ಸಮಿತಿಯ ಸಭೆಯಲ್ಲಿ ಕಳವಳ ವ್ಯಕ್ತಪಡಿಸಿದವು.
ಪಾಶ್ಚಿಮಾತ್ಯ ರಾಷ್ಟ್ರಗಳು, ಹಾಂಕಾಂಗ್ನಲ್ಲಿ ರಾಷ್ಟ್ರೀಯ ಭದ್ರತಾ ಕಾನೂನು ಚೀನಾದ ಕಾನೂನುಬದ್ಧ ಕಟ್ಟುಪಾಡುಗಳಿಗೆ ಅನುಗುಣವಾಗಿಲ್ಲ. ಚೀನಾ ಬಲವಂತವಾಗಿ ತನ್ನ ಮುಖ್ಯ ಭೂಮಿಕೆಗೆ ವರ್ಗಾಯಿಸಲು ಹವಣಿಸುತ್ತಿದೆ ಎಂದು ಯುಎನ್. ತಜ್ಞರ ಮತ್ತೊಂದು ಗುಂಪು ಬೇಸರ ಹೊರಹಾಕಿತು.
ಅಮೆರಿಕ, ಜರ್ಮನ್ ಮತ್ತು ಇಂಗ್ಲೆಂಡ್ ವಿಶ್ವಸಂಸ್ಥೆಯ ವೇದಿಕೆಯನ್ನು ದುರುಪಯೋಗಪಡಿಸಿಕೊಂಡಿವೆ. ಮಾನವ ಹಕ್ಕುಗಳ ಸಮಸ್ಯೆಗಳನ್ನು ರಾಜಕೀಯಗೊಳಿಸಿದೆ. ರಾಜಕೀಯ ಮುಖಾಮುಖಿ ಮತ್ತು ವೈರತ್ವ ಪ್ರಚೋದಿಸುತ್ತದೆ ಎಂದು ಚೀನಾದ ರಾಯಭಾರಿ ಜಾಂಗ್ ಜುನ್ ಆರೋಪಿಸಿ, ಹೇಳಿಕೆಗಳನ್ನು ತಳ್ಳಿಹಾಕಿತು.
ಅವರೆಲ್ಲ ಸುಳ್ಳು ಮಾಹಿತಿ ಮತ್ತು ರಾಜಕೀಯ ವೈರಸ್ ಹರಡುತ್ತಿದ್ದಾರೆ. ಚೀನಾವನ್ನು ಗುರಿಯಾಗಿಸಿಕೊಂಡಿದ್ದಾರೆ. ಚೀನಾದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಾರೆ. ಚೀನಾವು ಇದನ್ನು ದೃಢವಾಗಿ ವಿರೋಧಿಸುತ್ತದೆ ಮತ್ತು ತಿರಸ್ಕರಿಸುತ್ತದೆ ಎಂದು ಮಾನವ ಹಕ್ಕುಗಳ ಸಮಿತಿಗೆ ತಿಳಿಸಿದರು.
ಟ್ರಂಪ್ ಆಡಳಿತದ ವಿರುದ್ಧ ವಾಗ್ದಾಳಿ ನಡೆಸಿದ ಜುನ್, ನಿಮ್ಮ ತುಚ್ಛ ಕೃತ್ಯಗಳು ಇತಿಹಾಸದ ಪ್ರವೃತ್ತಿಗೆ ಸಂಪೂರ್ಣವಾಗಿ ವಿರೋಧವಾಗಿವೆ. ಚೀನಾವನ್ನು ದೂಷಿಸುವುದರಿಂದ ನಿಮ್ಮ ಕಳಪೆ ಮಾನವ ಹಕ್ಕುಗಳ ದಾಖಲೆಗಳನ್ನು ಮುಚ್ಚಿಹಾಕಲು ಆಗುವುದಿಲ್ಲ ಎಂದರು.
ಕೋವಿಡ್-19, ಅಮೆರಿಕದಲ್ಲಿ ಜನಾಂಗೀಯ ತಾರತಮ್ಯ ಮತ್ತು ಪೊಲೀಸ್ ಹಿಂಸಾಚಾರದಿಂದ 2,00,000ಕ್ಕೂ ಅಧಿಕ ಅಮೆರಿಕನ್ನರ ಸಾವುಗಳಾಗಿವೆ. ಅಮೆರಿಕ ವಿಶ್ವದ ಅತ್ಯಂತ ಯುದ್ಧ ಮಾಡುವ ದೇಶ ಎಂಬ ಹೆಸರುವಾಸಿಯಾಗಿದೆ ಎಂದು ಜರಿದರು.
ಜರ್ಮನಿಯ ಹ್ಯೂಸ್ಜೆನ್ ತೀಕ್ಷ್ಣವಾಗಿ ಪ್ರತ್ಯುತ್ತರ ನೀಡಿ, ಪಾಶ್ಚಿಮಾತ್ಯ ಹೇಳಿಕೆಗೆ ಬೆಂಬಲ ಹೆಚ್ಚಾಗುತ್ತಿರುವುದು ಮಾನವ ಹಕ್ಕುಗಳ ಭರವಸೆಯ ಸಂಕೇತವಾಗಿದೆ. ಚೀನಾದಲ್ಲಿ ಉಯಿಘರ್ಗಳಿಗೆ ಭರವಸೆಯ ಸಂಕೇತವಿದೆ ಎಂಬುದನ್ನು ತೋರಿಸಿದೆ. ಕಳೆದ ವರ್ಷದ ಉಯಿಘರ್‌ಗಳ ಹೇಳಿಕೆಯನ್ನು ಕೇವಲ 23 ದೇಶಗಳು ಬೆಂಬಲಿಸಿದ್ದವು. ಆದರೆ, ಹಾಂಕಾಂಗ್ ಸೇರಿದಂತೆ ಈ ವರ್ಷದ ವಿಶಾಲ ಹೇಳಿಕೆಯಲ್ಲಿ 39 ಬೆಂಬಲಿಗರಿದ್ದಾರೆ ಎಂದರು.
ಉಯಿಘರ್ ಅಲ್ಪಸಂಖ್ಯಾತರ ಬಗ್ಗೆ ಚೀನಾದ ನೀತಿಯ ಬಗ್ಗೆ ಕಳವಳ ವ್ಯಕ್ತವಾಗುತ್ತಿದೆ. ವಿಶ್ವಾದ್ಯಂತ ಅವರ ಬಗ್ಗೆ ಕಾಳಜಿ ಇದೆ. ಚೀನಾ ಮಸೀದಿಗಳನ್ನು ಕೆಡವುದನ್ನು ನಿಲ್ಲಿಸಬೇಕು. ಬಲವಂತದ ದುಡಿಮೆ ಮತ್ತು ಜನನ ನಿಯಂತ್ರಣವನ್ನು ಬಿಡಬೇಕು ಎಂಬ ಸಂದೇಶ ರವಾನಿಸಿದರು.