ವಾಷಿಂಗ್ಟನ್: ಬೋಯಿಂಗ್ 737 ಮ್ಯಾಕ್ಸ್ ವಿಮಾನ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ ಎಂಬುದು ನ್ಯಾಯಾಂಗ ಇಲಾಖೆಯ ತನಿಖೆಯಲ್ಲಿ ಇತ್ಯರ್ಥವಾಗಿದ್ದು, ಈ ಹಿನ್ನೆಲೆಯಲ್ಲಿ 2.5 ಬಿಲಿಯನ್ ಡಾಲರ್ ಪರಿಹಾರ ಪಾವತಿಸಲಿದ್ದಾರೆ. ಇತ್ತೀಚೆಗೆ ನಡೆದ ಎರಡು ಬೋಯಿಂಗ್ ವಿಮಾನ ದುರಂತದ ಸಂದರ್ಭದಲ್ಲಿ ಸಿಬ್ಬಂದಿ ಪ್ರಯಾಣಿಕರಿಗೆ ಸರಿಯಾದ ಸುರಕ್ಷತಾ ಮಾಹಿತಿಯನ್ನು ನೀಡಿರಲಿಲ್ಲ. ಈ ಘಟನೆಯಲ್ಲಿ ಪ್ರಾಣಹಾನಿ ಸಂಭವಿಸಿತ್ತು.
ಯು.ಎಸ್ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಶನ್‌ಗೆ ಬೋಯಿಂಗ್ ಸಿಬ್ಬಂದಿಗಳು ವಿಮಾನದ ಸುರಕ್ಷತೆಯ ವಿಷಯಗಳ ಬಗ್ಗೆ ಸರಿಯಾದ ಹೇಳಿಕೆಗಳನ್ನು ನೀಡಿರಲಿಲ್ಲ. ಅಷ್ಟೇ ಅಲ್ಲದೆ, ಅಪಘಾತ ಸಂಭವಿಸಿದ ಬಳಿಕ ಅವರು ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
"ಬೋಯಿಂಗ್ ನೌಕರರು ಎಫ್‌ಎಎಗೆ ತಿಳಿಸುವ ಅಸಮರ್ಪಕ ಹೇಳಿಕೆಗಳು, ಅರ್ಧ - ಸತ್ಯಗಳು ಮತ್ತು ಲೋಪಗಳು ಸಾರ್ವಜನಿಕರ ಸುರಕ್ಷತೆಯನ್ನು ಖಾತ್ರಿಪಡಿಸುವ ಸರ್ಕಾರದ ಸಾಮರ್ಥ್ಯಕ್ಕೆ ಅಡ್ಡಿಯುಂಟುಮಾಡಿದೆ" ಎಂದು ಡಲ್ಲಾಸ್‌ನ ಯು.ಎಸ್. ಅಟಾರ್ನಿ ಎರಿನ್ ನೀಲಿ ಕಾಕ್ಸ್ ಹೇಳಿದ್ದಾರೆ.
ನ್ಯಾಯಾಂಗ ಇಲಾಖೆಯ ಅಪರಾಧ ವಿಭಾಗದ ಆಕ್ಟಿಂಗ್ ಅಸಿಸ್ಟೆಂಟ್ ಅಟಾರ್ನಿ ಜನರಲ್ ಡೇವಿಡ್ ಬರ್ನ್ಸ್, "ಬೋಯಿಂಗ್‌ನ ನೌಕರರು ಲಾಭದ ಹಾದಿಯನ್ನು ಆರಿಸಿಕೊಂಡರು" ಎಂದು ಹೇಳಿದ್ದಾರೆ.