ವಿಲ್ಮಿಂಗ್ಟನ್ (ಅಮೆರಿಕ): ದೇಶದ ಜನತೆಗೆ ಕೋವಿಡ್ ಲಸಿಕೆ ಪೂರೈಸಲು ಅಗತ್ಯವಿರುವ ಸಾಮಗ್ರಿಗಳನ್ನು ಹೆಚ್ಚಿಸುವುದಾಗಿ ಯುಎಸ್ ಚುನಾಯಿತ ಅಧ್ಯಕ್ಷ ಜೋ ಬೈಡನ್ ಭರವಸೆ ನೀಡಿದ್ದಾರೆ. ಅಧಿಕಾರ ವಹಿಸಿಕೊಂಡ ಮೊದಲ 100 ದಿನಗಳಲ್ಲಿ ಎಲ್ಲರಿಗೂ ವ್ಯಾಕ್ಸಿನ್ ನೀಡುವುದಾಗಿಯೂ ಹೇಳಿದ್ದಾರೆ.
ರಾಷ್ಟ್ರದ ಜನತೆ ಕೋವಿಡ್ ನಿಯಮಗಳನ್ನು ಪಾಲಿಸುವುದರಿಂದ ವೈರಸ್ನಿಂದ ತಪ್ಪಿಸಿಕೊಳ್ಳಬಹುದು. ಎಲ್ಲರೂ ತಪ್ಪದೇ ನಿಯಮ ಪಾಲಿಸಿ ಎಂದು ಸಲಹೆ ನೀಡಿದ್ದಾರೆ. ಕೋವಿಡ್ ನಿರ್ವಹಣಾ ವಿಷಯ ರಾಜಕೀಯವಲ್ಲ. ಜೀವಗಳನ್ನು ಉಳಿಸುವ ಪ್ರಶ್ನೆ. ಕೊರೊನಾವನ್ನು ರಾಜಕೀಯಗೊಳಿಸಲು ಪ್ರಯತ್ನಿಸುವುದು ಮೂರ್ಖತನ ಎಂದು ಬೈಡನ್ ತಮ್ಮ ವಿರೋಧಿಗಳ ವಿರುದ್ಧ ಕುಟುಕಿದ್ದಾರೆ.
ಕೊರೊನಾ ಬಿಕ್ಕಟ್ಟಿನಿಂದಾಗಿ ಅಸ್ಥಿರಗೊಂಡಿರುವ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು 1.9 ಟ್ರಿಲಿಯನ್ ಡಾಲರ್ಗಳನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ 400 ಬಿಲಿಯನ್ ಡಾಲರ್ ಹಣವನ್ನು ಸೋಂಕು ನಿಯಂತ್ರಿಸಲು ಮೀಸಲಿಡಲಾಗಿದೆ.
ದೇಶದಲ್ಲಿ ಹಿರಿಯ ನಾಗರಿಕರು, ಆರೋಗ್ಯ ಕಾರ್ಯಕರ್ತರು, ವಿವಿಧ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ವ್ಯಾಕ್ಸಿನ್ ನೀಡಬೇಕು. ಜತೆಗೆ ಸಾರ್ವಜನಿಕರಿಗೆ ಶೀಘ್ರ ಲಸಿಕೆ ತಲುಪಿಸಲು ಸ್ಥಳೀಯ ಮೆಡಿಕಲ್ ಸ್ಟೋರ್ಗಳನ್ನು ಸಜ್ಜುಗೊಳಿಸಬೇಕು ಎಂದು ಬೈಡನ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ :'ಪಾಕಿಸ್ತಾನ ಕೋವಿಡ್ -19 ಲಸಿಕೆಗೆ ಯಾವುದೇ ಆದೇಶ ನೀಡಿಲ್ಲ'
ಸಾಮೂಹಿಕ ವ್ಯಾಕ್ಸಿನೇಷನ್ ಮಾಡಬೇಕು. ತಡ ಮಾಡಿದಷ್ಟು ವೈರಸ್ಗೆ ಮತ್ತಷ್ಟು ಜನರು ಬಲಿಯಾಗಬಹುದು. ಹಾಗಾಗಿ ನೂರು ದಿನಗಳಲ್ಲಿ 10 ಕೋಟಿ ಜನರಿಗೆ ಲಸಿಕೆ ನೀಡುವ ಕಾರ್ಯವಾಗಬೇಕು. ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಬೈಡನ್ ಹೇಳಿದ್ದಾರೆ.