ವಾಷಿಂಗ್ಟನ್ : ಕೋವಿಡ್ ಬಿಕ್ಕಟ್ಟು ಬಗೆಹರಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಜನತೆಗೆ ಉದ್ಯೋಗ ನೀಡುವುದರ ಜತೆಗೆ ವ್ಯಾಕ್ಸಿನೇಷನ್ಗೂ ಕ್ರಮ ಕೈಗೊಳ್ಳಲಾಗುವುದು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಪ್ರತಿಜ್ಞೆ ಮಾಡಿದ್ದಾರೆ.
ಯುಎಸ್ ಸಂಸತ್ ಬಜೆಟ್ ನಿರ್ಣಯವನ್ನು ಅಂಗೀಕರಿಸಿದ್ದು, 1.9 ಟ್ರಿಲಿಯನ್ ಯುಎಸ್ಡಿ (1 ಕೋಟಿ 38 ಲಕ್ಷದ 29 ಸಾವಿರದ 777 ಲಕ್ಷ ಕೋಟಿ ರೂ.) ಪರಿಹಾರ ಪ್ಯಾಕೇಜ್ ಆಯವ್ಯಯ ಮಂಡನೆಗೆ ಬೈಡನ್ ಸರ್ಕಾರ ಮುಂದಾಗಿದೆ.
ಈ ದೇಶದಲ್ಲಿ ಸಮಸ್ಯೆ ಬಗೆಹರಿಸುವ ಅನೇಕ ಸಾಧನಗಳಿವೆ. ಅವುಗಳನ್ನು ನಾವು ಆರಿಸಿಕೊಳ್ಳಬೇಕಿದೆಯಷ್ಟೇ.. ಇದು ನಾವೆಲ್ಲರೂ ಒಟ್ಟಾಗಿ ಕಾರ್ಯ ನಿರ್ವಹಿಸಬೇಕಿರುವ ಸಮಯ ಎಂದು ದೇಶದ ಜನತೆಗೆ ಕರೆ ಕೊಟ್ಟರು.
ಯುಎಸ್ ಆರ್ಥಿಕತೆ ಸದ್ಯ ತೊಂದರೆಯಲ್ಲಿದೆ. ಕಳೆದ ತಿಂಗಳಲ್ಲಿ ಖಾಸಗಿ ವಲಯಕ್ಕೆ 6 ಸಾವಿರ ಉದ್ಯೋಗಗಳನ್ನು ಸೇರಿಸಲಾಗಿದೆ. 10 ಲಕ್ಷಕ್ಕೂ ಹೆಚ್ಚು ಜನರು ನಿರುದ್ಯೋಗಿಗಳಾಗಿದ್ದಾರೆ ಎಂದರು.
ದೇಶದಲ್ಲಿ ಅನೇಕರು ಹಸಿವಿನಿಂದ ಬಳಲುತ್ತಿದ್ದಾರೆ. ಅದೆಷ್ಟೋ ಜನರಿಗೆ ಕೆಲಸಗಳಿಲ್ಲ, ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು. ಅಮೆರಿಕನ್ ಪಾರುಗಾಣಿಕಾ ಯೋಜನೆಯನ್ನು ರೂಪಿಸಿದ ಅಧ್ಯಕ್ಷರು, ಕೋವಿಡ್ ನಿಯಂತ್ರಣಕ್ಕೆ 160 ಶತಕೋಟಿ ಡಾಲರ್ ಮೀಸಲಿಡುವುದಾಗಿ ಹೇಳಿದರು.
ಜನರ ಆರೋಗ್ಯ ವಿಮೆ ಪಾವತಿಸಲು ಸಹಾಯ ಮಾಡಲು ಹಣ ಮೀಸಲಿರಿಸಲಾಗಿದೆ. ಬೀದಿಯಲ್ಲಿರುವ ಜನರಿಗೆ ಬಾಡಿಗೆ ಮನೆ ನೀಡಲು ಈ ಹಣ ಸಹಾಯವಾಗುತ್ತದೆ. ಶಾಲೆ ತೆರೆಯಲು, ಅಗ್ನಿಶಾಮಕ ಸಿಬ್ಬಂದಿ, ವೈದ್ಯರು, ಕಾರ್ಮಿಕರಿಗೆ ಕನಿಷ್ಠ ವೇತನ ನೀಡಲು ಈ ಹಣ ಸಹಾಯಕವಾಗುತ್ತದೆ ಎಂದರು.
ದೇಶದಲ್ಲಿ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ. ಮಾನಸಿಕ ಆರೋಗ್ಯದ ಅಗತ್ಯತೆಗಳು ಹೆಚ್ಚುತ್ತಿವೆ ಮತ್ತು ಮಹಿಳೆಯರು, ಮಕ್ಕಳ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ ಎಂದು ಬೈಡನ್ ಉಲ್ಲೇಖಿಸಿದ್ದಾರೆ. ಇವುಗಳನ್ನು ತಡೆಗಟ್ಟಲು ಸರ್ಕಾರವು ವೇಗವಾಗಿ ಕಾರ್ಯ ನಿರ್ವಹಿಸಬೇಕಾಗಿತ್ತು ಎಂದು ಪರೋಕ್ಷವಾಗಿ ಟ್ರಂಪ್ ಸರ್ಕಾರದ ವಿರುದ್ಧ ಹರಿಹಾಯ್ದರು.