ವಾಷಿಂಗ್ಟನ್: ಪ್ರಪಂಚಾದಾದ್ಯಂತ ತೀವ್ರ ಖಂಡನೆಗೆ ಕಾರಣವಾಗಿದ್ದ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಹತ್ಯೆ ನಡೆದು ಮೇ 25ಕ್ಕೆ ಒಂದು ವರ್ಷ ಸಂದುತ್ತಿದೆ. ಈ ಹಿನ್ನೆಲೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಫ್ಲಾಯ್ಡ್ ಕುಟುಂಬಸ್ಥರನ್ನ ಶ್ವೇತಭವನಕ್ಕೆ ಆಹ್ವಾನಿಸಿದ್ದು, ಅವರಿಗೆ ಆತಿಥ್ಯ ನೀಡಲಿದ್ದಾರೆ.
ಜಾರ್ಜ್ ಫ್ಲಾಯ್ಡ್ ಅವರ ಸಾವಿನ ಸ್ಮರಣಾರ್ಥವಾಗಿ ಯುಎಸ್ ಅಧ್ಯಕ್ಷರು ಕಾರ್ಯಕ್ರಮವೊಂದನ್ನು ಆಯೋಜಿಸಿದ್ದಾರೆ. ಫ್ಲಾಯ್ಡ್ ಕುಟುಂಬಸ್ಥರಿಗೆ ಆಹ್ವಾನ ನೀಡಲಾಗಿದೆ. ಆದರೆ ಬೈಡನ್ ತಮ್ಮ ಯೋಜನೆಗಳ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿಲ್ಲ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಜೆನ್ ಸಾಕಿ ಹೇಳಿದ್ದಾರೆ.
2020ರ ಮೇ 25ರಂದು ಅಮೆರಿಕದ ಮಿನ್ನಿಯಾಪೊಲೀಸ್ ನಗರದ ಅಧಿಕಾರಿ ನೀಡಿದ ಹಿಂಸೆಯಿಂದಾಗಿ ಆಫ್ರಿಕನ್-ಅಮೆರಿಕನ್ ವ್ಯಕ್ತಿ ಜಾರ್ಜ್ ಫ್ಲಾಯ್ಡ್ ಮೃತಪಟ್ಟಿದ್ದ. ಫ್ಲಾಯ್ಡ್ ಕುತ್ತಿಗೆಯ ಮೇಲೆ ಪೊಲೀಸ್ ಅಧಿಕಾರಿ ತನ್ನ ಮೊಣಕಾಲುಗಳನ್ನಿರಿಸಿ ಹಿಂಸೆ ನೀಡಿದ್ದ. ಉಸಿರಾಡಲು ಕಷ್ಟವಾಗಿ ಫ್ಲಾಯ್ಡ್ ಪ್ರಾಣ ಬಿಟ್ಟಿದ್ದ.

ಇದನ್ನೂ ಓದಿ: ಜಾರ್ಜ್ ಫ್ಲಾಯ್ಡ್ ಹತ್ಯೆ ಪ್ರಕರಣ: ನಾಲ್ವರು ಮಾಜಿ ಪೊಲೀಸರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ
ಕಪ್ಪು ಅಮೆರಿಕನ್ನರ ಮೇಲಿನ ಜನಾಂಗೀಯ ದಾಳಿಗೆ ಫ್ಲಾಯ್ಡ್ ಹಿಂಸಾತ್ಮಕ ಸಾವು ಸಾಕ್ಷಿಯಾಗಿದ್ದು, ಈ ಸಾವಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಕೊರೊನಾ ಭೀತಿಯ ನಡುವೆಯೂ ಅಮೆರಿಕ ಸೇರಿ ಯೂರೋಪಿನ ಹಲವು ದೇಶಗಳಲ್ಲಿ ಪ್ರತಿಭಟನೆಗಳು ನಡೆದಿದ್ದವು.
ಜಾರ್ಜ್ ಫ್ಲಾಯ್ಡ್ ಬಂಧನ ಮತ್ತು ಸಾವಿನ ಪ್ರಕರಣದಲ್ಲಿ ಆರೋಪಿಗಳಾಗಿರುವ ಮಿನ್ನಿಯಾಪೋಲಿಸ್ನ ನಾಲ್ವರು ಮಾಜಿ ಪೊಲೀಸ್ ಅಧಿಕಾರಿಗಳ ವಿರುದ್ಧ ಫೆಡರಲ್ ಗ್ರ್ಯಾಂಡ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಅಲ್ಲದೇ ಫ್ಲಾಯ್ಡ್ ಕುಟುಂಬಕ್ಕೆ 27 ಮಿಲಿಯನ್ ಡಾಲರ್ (ಸುಮಾರು 196 ಕೋಟಿ ರೂ.) ನೀಡಲು ಮಿನ್ನಿಯಾ ಪೊಲೀಸ್ ಆಡಳಿತ ಒಪ್ಪಿಕೊಂಡಿದೆ.