ವಾಷಿಂಗ್ಟನ್ (ಯು.ಎಸ್): ಹಿಂದಿನ ಆಡಳಿತದ ಶೂನ್ಯ ಸಹಿಷ್ಣು ನೀತಿಯಡಿ ದಕ್ಷಿಣ ಗಡಿಯಲ್ಲಿ ಬೇರ್ಪಟ್ಟ ವಲಸೆ ಕುಟುಂಬಗಳನ್ನು ಮತ್ತೆ ಒಗ್ಗೂಡಿಸುವುದು ಸೇರಿದಂತೆ ಟ್ರಂಪ್ ಆಡಳಿತದ ವಲಸೆ ನೀತಿಗಳ ಬಗೆಗಿನ ಸಮಸ್ಯೆಗಳನ್ನು ಪರಿಹರಿಸಲು ಯುಎಸ್ ಅಧ್ಯಕ್ಷ ಜೋ ಬೈಡನ್ ಮೂರು ಕಾರ್ಯನಿರ್ವಾಹಕ ಆದೇಶಗಳಿಗೆ ಸಹಿ ಹಾಕಿದ್ದಾರೆ.
"ಹಿಂದಿನ ಆಡಳಿತದ ನೈತಿಕ ಮತ್ತು ರಾಷ್ಟ್ರೀಯ ಅವಮಾನವನ್ನು ರದ್ದುಗೊಳಿಸಲು ನಾವು ಕೆಲಸ ಮಾಡಲಿದ್ದೇವೆ. ಮಕ್ಕಳನ್ನು ಗಡಿಯಲ್ಲಿರುವ ಅವರ ಕುಟುಂಬಗಳಿಂದ ಬೇರ್ಪಡಿಸಲಾಗಿದ್ದು, ಅವರನ್ನು ಹೆತ್ತವರೊಂದಿಗೆ ಮತ್ತೆ ಒಂದುಗೂಡಿಸಲು ಕೆಲಸ ಮಾಡಲಿದ್ದೇವೆ" ಎಂದು ಬೈಡನ್ ಓವಲ್ ಕಚೇರಿಯಲ್ಲಿ ಹೇಳಿದರು.
ಕಾರ್ಯನಿರ್ವಾಹಕ ಆದೇಶವು ಯುಎಸ್ ದಕ್ಷಿಣ ಗಡಿಗೆ ವಲಸೆಯ ಮೂಲ ಕಾರಣಗಳನ್ನು ತಿಳಿಸುತ್ತದೆ ಮತ್ತು ಟ್ರಂಪ್ ಆಡಳಿತದ ವಲಸೆ ನೀತಿಗಳ ಸಂಪೂರ್ಣ ವಿಮರ್ಶೆಯನ್ನು ನಿರ್ದೇಶಿಸುತ್ತದೆ ಎಂದು ಬೈಡೆನ್ ಹೇಳಿದ್ದಾರೆ.