ವಾಷಿಂಗ್ಟನ್: ಕೋವಿಡ್-19 ವಿರುದ್ಧ ಹೋರಾಡಲು ದೇಶವ್ಯಾಪಿ ಲಾಕ್ಡೌನ್ ವಿಧಿಸುವ ವಿಚಾರವನ್ನು ತಳ್ಳಿ ಹಾಕಿರುವ ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಅವರು, 2.50 ಲಕ್ಷ ಅಮೆರಿಕನ್ನರನ್ನು ಬಲಿ ಪಡೆದ ಮಹಾಮಾರಿ ಮತ್ತಷ್ಟು ಹರಡುವುದನ್ನು ನಿಯಂತ್ರಿಸಲು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಒತ್ತಾಯಿಸಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಕೊರೊನಾ ನಿಯಂತ್ರಿಸಲು ಲಾಕ್ಡೌನ್ ಅನವಶ್ಯಕ. ಏಕೆಂದರೆ, ಪ್ರತಿಯೊಂದು ಸಮುದಾಯ, ನಗರ ಮತ್ತು ಪ್ರದೇಶವ ತೀರಾ ವಿಭಿನ್ನ. ಬಡ ಜನರಿಗೆ ಕಷ್ಟವಾಗಲಿದೆ. ಹಾಗೂ ಆರ್ಥಿಕ ವಲಯಕ್ಕೆ ಯಾವುದೇ ರೀತಿ ತೊಂದರೆ ಕೊಡುವುದಿಲ್ಲ ಎಂದರು.
ಕೊರೊನಾ ವಿಚಾರದಲ್ಲಿ ನಿಮ್ಮ ಸಹಕಾರ ಅತೀ ಅವಶ್ಯಕ. ಲಾಕ್ಡೌನ್ ವಿಧಿಸದೆಯೇ ವೈರಸ್ ಮಟ್ಟ ಹಾಕುತ್ತೇನೆ. ಸಹಕಾರ ನೀಡುತ್ತೀರಾ ಎಂದು ಭಾವಿಸಿಯೇ ಲಾಕ್ಡೌನ್ ನಿರ್ಧಾರವನ್ನು ಕೈ ಬಿಟ್ಟಿದ್ದೇನೆ. ಒಟ್ಟಿನಲ್ಲಿ ಕೊರೊನಾಗೆ ಅಂತ್ಯ ಹಾಡುವುದು ನಿಶ್ಚಿತ ಎಂದವರು ಶಪಥ ಮಾಡಿದರು. ಉಭಯ ಪಕ್ಷೀಯ ಆಡಳಿತಗಾರರ ಸಭೆಯಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರೂ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ ಎಂದು ಮನವಿ ಮಾಡಿದರು.