ನ್ಯೂಯಾರ್ಕ್: ಅಮೆರಿಕದ ಆಡಳಿತರೂಢ ಸರ್ಕಾರ ಏಪ್ರಿಲ್ 22-23ರಂದು ಆಯೋಜಿಸಿರುವ ಹವಾಮಾನ ಕುರಿತ ಜಾಗತಿಕ ನಾಯಕರ ಶೃಂಗಸಭೆಯಲ್ಲಿ ಭಾಗವಹಿಸುವಂತೆ ಅಧ್ಯಕ್ಷ ಜೋ ಬೈಡನ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ 40 ರಾಷ್ಟ್ರಗಳ ಮುಖ್ಯಸ್ಥರನ್ನು ಆಹ್ವಾನಿಸಿದ್ದಾರೆ.
ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್, ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್, ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ, ಭೂತಾನ್ನ ಲೋಟಾಯ್ ತ್ಸೆರಿಂಗ್ ಸೇರಿದಂತೆ ಇತರ ನಾಯಕರನ್ನು ಹವಾಮಾನ ಬದಲಾವಣೆ ವಿರುದ್ಧ ಹೋರಾಡುವ ತುರ್ತು ಅಗತ್ಯದ ಬಗ್ಗೆ ಚರ್ಚೆ ನಡೆಸಲು ಶ್ವೇತಭವನ ಆಹ್ವಾನಿಸಿದೆ.
ಸೌದಿ ರಾಜ ಸಲ್ಮಾನ್ ಬಿನ್ ಅಬ್ದುಲಾ ಝೆಜ್, ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಮತ್ತು ಟರ್ಕಿಶ್ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೊಗನ್ ಕೂಡ ಆಹ್ವಾನಿತರಲ್ಲಿ ಇದ್ದಾರೆ.
ಹವಾಮಾನ ವೈಪರೀತ್ಯ ಕುರಿತಾದ ಜಾಗತಿಕ ನಾಯಕರ ಶೃಂಗಸಭೆಯು ಸದೃಢವಾದ ಹವಾಮಾನ ಕ್ರಿಯೆಯ ತುರ್ತುಸ್ಥಿತಿ ಮತ್ತು ಆರ್ಥಿಕ ಪ್ರಯೋಜನಗಳನ್ನು ಒತ್ತಿಹೇಳುತ್ತದೆ. ಈ ನವೆಂಬರ್‌ನಲ್ಲಿ ಗ್ಲ್ಯಾಸ್ಗೋದಲ್ಲಿ ನಡೆಯಲಿರುವ ವಿಶ್ವ ಸಂಸ್ಥೆ ಹವಾಮಾನ ಬದಲಾವಣೆ ಸಮ್ಮೇಳನದ (ಸಿಒಪಿ 26) ಹಾದಿಯಲ್ಲಿ ಇದು ಪ್ರಮುಖ ಮೈಲಿಗಲ್ಲಾಗಲಿದೆ ಎಂದು ಶ್ವೇತಭವನ ತಿಳಿಸಿದೆ.
ಇದನ್ನೂ ಓದಿ: ಕಾಳಿ ದೇಗುಲದಲ್ಲಿ ಮೋದಿ ವಿಶೇಷ ಪೂಜೆ: ಕೋವಿಡ್ನಿಂದ ಮುಕ್ತಿಗೆ ಪ್ರಾರ್ಥನೆ
ವರ್ಚುವಲ್ ಶೃಂಗಸಭೆಯ ನಡಾವಳಿಗಳನ್ನು ಜನತೆ ವೀಕ್ಷಿಸಲು ನೇರ ಪ್ರಸಾರ ಮಾಡಲಾಗುತ್ತದೆ.