ವಾಷಿಂಗ್ಟನ್: ಉಕ್ರೇನ್ ಮೇಲೆ ದಾಳಿ ಮುಂದುವರೆಸಿರುವ ರಷ್ಯಾ ವಿರುದ್ಧ ಅಮೆರಿಕ ಮತ್ತೆ ಆಕ್ರೋಶ ವ್ಯಕ್ತಪಡಿಸಿದೆ. ರಷ್ಯಾದ ಆಕ್ರಮಣವು ನಾಗರಿಕರ ವಿನಾಶಕಾರಿ ಪರಿಣಾಮಗಳನ್ನು ಉಂಟುಮಾಡುತ್ತದೆ. ಹೀಗಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ 'ಯುದ್ಧ ಅಪರಾಧಿ' ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ವೈಟ್‌ಹೌಸ್‌ನ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಬೈಡನ್, ಪುಟಿನ್ ಒಬ್ಬ ಯುದ್ಧ ಅಪರಾಧಿ ಎಂದು ನಾನು ಭಾವಿಸುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ. ನಿನ್ನೆ ಮಾರಿಯುಪೋಲ್‌ನ ಅತಿದೊಡ್ಡ ಆಸ್ಪತ್ರೆ ಮೇಲೆ ರಷ್ಯಾದ ಪಡೆಗಳು ದಾಳಿ ಮಾಡಿ ನೂರಾರು ವೈದ್ಯರು ಮತ್ತು ರೋಗಿಗಳನ್ನು ಒತ್ತೆಯಾಳುಗಳಾಗಿ ಹಿಡಿದಿಟ್ಟುಕೊಂಡಿರುವ ವರದಿಗಳನ್ನು ನೋಡಿದ್ದೇವೆ. ಈ ದುಷ್ಕೃತ್ಯಗಳು ಜಗತ್ತಿನ ಆಕ್ರೋಶಕ್ಕೆ ಕಾರಣವಾಗಿದೆ. ಉಕ್ರೇನ್‌ಗೆ ನಮ್ಮ ಬೆಂಬಲ ಇದ್ದು, ಪುಟಿನ್ ಭಾರಿ ಬೆಲೆ ತೆರುವಂತೆ ಮಾಡುವ ನಮ್ಮ ಸಂಕಲ್ಪದಲ್ಲಿ ಜಗತ್ತು ಒಗ್ಗೂಡಿದೆ ಎಂದಿದ್ದಾರೆ.
ನಮ್ಮ ಮಿತ್ರರಾಷ್ಟ್ರಗಳು ಮತ್ತು ಪಾಲುದಾರರೊಂದಿಗೆ ಅಮೆರಿಕ ಈ ಪ್ರಯತ್ನವನ್ನು ಮುನ್ನಡೆಸುತ್ತಿದೆ. ನಾವು ಇಂದು ಸೇರಿಸುತ್ತಿರುವ ಅಗಾಧ ಮಟ್ಟದ ಭದ್ರತೆ, ಮಾನವೀಯ ನೆರವು ಹಾಗೂ ಮುಂದಿನ ದಿನಗಳಲ್ಲಿ ನಾವು ಹೆಚ್ಚಿನದನ್ನು ಮಾಡಲಿದ್ದೇವೆ. ರಷ್ಯಾ ಅಧ್ಯಕ್ಷ ಪುಟಿನ್ ಉಕ್ರೇನ್‌ನಲ್ಲಿ ಭಯಾನಕ ವಿನಾಶ ಮತ್ತು ಭಯಾನಕತೆ ಉಂಟುಮಾಡುತ್ತಿದ್ದಾರೆ. ಅಪಾರ್ಟ್‌ಮೆಂಟ್, ಹೆರಿಗೆ ವಾರ್ಡ್‌ಗಳು, ಆಸ್ಪತ್ರೆಗಳ ಮೇಲೆ ಬಾಂಬ್ ದಾಳಿ ಮಾಡುತ್ತಿದ್ದಾರೆ ಎಂಬ ಮಾಹಿತಿ ಇದೆ ಎಂದು ಹೇಳಿದರು.
ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪ್ಸಾಕಿ, ಪುಟಿನ್ 'ಯುದ್ಧ ಅಪರಾಧಿ' ಎಂಬ ಅಧ್ಯಕ್ಷ ಬೈಡನ್ ಅವರ ಈ ಮಾತುಗಳು ವೈಯಕ್ತಿಕವಾಗಿದೆ. ಆಕ್ರಮಣದ ಮೂಲಕ ಕ್ರೂರ ಸರ್ವಾಧಿಕಾರಿಯ ಅನಾಗರಿಕ ಕ್ರಮಗಳನ್ನು ನಾವು ದೂರದರ್ಶನ ಮೂಲಕ ಏನು ನೋಡುತ್ತಿದ್ದೇವೆಯೋ ಅದನ್ನು ಅಧ್ಯಕ್ಷರು ವಿವರಿಸಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ: 'ರಷ್ಯಾ ಅಧ್ಯಕ್ಷ ಪುಟಿನ್ ವಾರ್ ಕ್ರಿಮಿನಲ್'; ಅಮೆರಿಕ ಸೆನೆಟ್‌ನಲ್ಲಿ ಸರ್ವಾನುಮತದ ನಿರ್ಣಯ ಅಂಗೀಕಾರ