ವಿಶ್ವಸಂಸ್ಥೆ: ಹೊಸ ವರ್ಷದ ದಿನದಂದು ವಿಶ್ವದಾದ್ಯಂತ 371,500ಕ್ಕೂ ಹೆಚ್ಚು ಶಿಶುಗಳು ಜನಿಸಿದ್ದು, ಭಾರತದಲ್ಲಿ ಅತಿ ಹೆಚ್ಚು ಎಂದರೆ 60,000 ಮಕ್ಕಳು ಹುಟ್ಟಿದ್ದಾರೆ ಎಂದು ಯುಎನ್ ಮಕ್ಕಳ ಸಂಸ್ಥೆ ತಿಳಿಸಿದೆ.
ಜಾಗತಿಕವಾಗಿ ಈ ಜನನಗಳಲ್ಲಿ ಅರ್ಧಕ್ಕಿಂತ ಹೆಚ್ಚು 10 ದೇಶಗಳಲ್ಲಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಭಾರತ (59,995), ಚೀನಾ (35,615), ನೈಜೀರಿಯಾ (21,439), ಪಾಕಿಸ್ತಾನ (14,161), ಇಂಡೋನೇಷ್ಯಾ (12,336), ಇಥಿಯೋಪಿಯಾ (12,006), ಯುನೈಟೆಡ್ ಸ್ಟೇಟ್ಸ್ (10,312), ಈಜಿಪ್ಟ್ (9,455), ಬಾಂಗ್ಲಾದೇಶ (9,236) ಮತ್ತು ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ (8,640) ಎಂದು ಸಂಸ್ಥೆ ತಿಳಿಸಿದೆ.
ಒಟ್ಟಾರೆಯಾಗಿ, 2021ರಲ್ಲಿ 140 ದಶಲಕ್ಷ ಮಕ್ಕಳು ಜನಿಸಲಿದ್ದಾರೆ ಮತ್ತು ಅವರ ಸರಾಸರಿ ಜೀವಿತಾವಧಿ 84 ವರ್ಷಗಳು ಎಂದು ನಿರೀಕ್ಷಿಸಲಾಗಿದೆ ಎಂದು ಯುಎನ್ ಸಂಸ್ಥೆ ತಿಳಿಸಿದೆ.