ಕ್ಯಾಲಿಫೋರ್ನಿಯಾ: ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಸಂಭವಿಸಿರುವ ಕಾಳ್ಗಿಚ್ಚು ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಬೆಂಕಿ ನಿಯಂತ್ರಿಸಲು ಅಗ್ನಿಶಾಮಕ ಸಿಬ್ಬಂದಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅಲ್ಲದೇ ಈ ನಡುವೆ ಕಾಳ್ಗಿಚ್ಚಿನಿಂದಾಗಿ ಐವರು ಬಲಿಯಾಗಿದ್ದರೆ, ಇನ್ನೂ ಸಾವಿರಾರು ಮನೆಗಳು ಬೆಂಕಿಗಾಹುತಿಯಾಗುವ ಸಂಭವವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿನ ಸೊಲಾನೊ ಕೌಟಿ ಭಾಗದಲ್ಲಿ ಓರ್ವ, ನೇಪಾ ಕೌಂಟಿಯಲ್ಲಿ ಮೂವರು, ಬಲಿಯಾಗಿದ್ದಾರೆ. ಇಬ್ಬರು ನಾಪತ್ತೆಯಾಗಿದ್ದಾರೆ. ಅಲ್ಲದೇ ಓರ್ವ ಅಗ್ನಿಶಾಮಕ ಸಿಬ್ಬಂದಿ ಹೆಲಿಕಾಪ್ಟರ್ ಪಥನಗೊಂಡು ಬಲಿಯಾದರೆ, 30ಕ್ಕೂ ಹೆಚ್ಚು ನಾಗರಿಕರು ಸೇರಿದಂತೆ ಹಲವು ಅಗ್ನಿಶಾಮಕ ದಳ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಗವರ್ನರ್ ಆದ ಗ್ಯಾವಿನ್ ನ್ಯೂಸೋಮ್ ಕಾಳ್ಗಿಚ್ಚಿನ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಇದೀಗ ಸಂಭವಿಸಿರುವ ಘಟನೆ ಜಾಗತಿಕ ತಾಪಮಾನ ಏರಿಕೆಗೆ ಪ್ರಮುಖ ಸಾಕ್ಷಿ ಎಂದಿದ್ದಾರೆ. ನಿಮಗೆ ಜಾಗತಿಕ ತಾಪಮಾನದ ಕುರಿತು ನಂಬಿಕೆ ಇಲ್ಲವಾದರೆ ಕ್ಯಾಲಿಫೋರ್ನಿಯಾಗೆ ಬನ್ನಿ ಎಂದಿದ್ದಾರೆ.
ಕ್ಯಾಲಿಫೋರ್ನಿಯಾದ ಸುಮಾರು 1,250 ಚದರ ಕಿಲೋಮೀಟರ್ ಕುರುಚಲು ಅರಣ್ಯ ಪ್ರದೇಶ, ಗ್ರಾಮೀಣ ಭಾಗ ಹಾಗೂ ಸ್ಯಾನ್ ಫ್ರಾನ್ಸಿಸ್ಕೋದ ಸುತ್ತಲಿನ ಅರಣ್ಯ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸುತ್ತಲಿನ ಪ್ರದೇಶಗಳಲ್ಲಿ ದಟ್ಟ ಹೊಗೆ ಆವರಿಸಿಕೊಂಡಿದೆ.
ಬೆಂಕಿ ನಂದಿಸುವ ಕಾರ್ಯಾಚರಣೆಗಾಗಿ 10 ಸಾವಿರ ಅಗ್ನಿಶಾಮಕ ದಳ ಸಿಬ್ಬಂದಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೇ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುತ್ತಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ ಇದೀಗ 72 ಗಂಟೆಗಳ ನಿರಂತರ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಅಲ್ಲದೇ ರಾಜ್ಯಕ್ಕೆ ಹೆಚ್ಚುವರಿಯಾಗಿ ಹೊರಗಿನಿಂದ 375 ಅಗ್ನಿಶಾಮಕ ವಾಹನಗಳು ಹಾಗೂ ಸಿಬ್ಬಂದಿ ಕರೆಸಿಕೊಳ್ಳಲಾಗುತ್ತಿದೆ.
ಅಲ್ಲದೇ ಕಳೆದೊಂದು ವಾರದಿಂದ ಫ್ರಂಟ್ಲೈನ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಗ್ನಿಶಾಮಕ ದಳ ಸಿಬ್ಬಂದಿಗೆ ವಿಶ್ರಾಂತಿ ಪಡೆಯಲು ಅವಕಾಶ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಾಳಿ ಮತ್ತು ಒಣಗಿದ ಮರಗಳಿಂದ ಬೆಂಕಿಯ ಜ್ವಾಲೆ ಭೀಕರವಾಗಿ ಹರಡುತ್ತಿದೆ. ಈ ಹಿನ್ನೆಲೆ ಅಗ್ನಿಶಾಮಕ ಸಿಬ್ಬಂದಿ ಅಲ್ಲಿನ ನಿವಾಸಿಗಳಿಗೆ ಸ್ಥಳಾಂತರಗೊಳ್ಳಲು ತಿಳಿಸಿದರೆ ಅಲ್ಲಿಂದ ತೆರಳಲು ಸಿದ್ಧರಾಗಿರಿ ಎಂದು ನಿವಾಸಿಗಳಿಗೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಇಂದು ಒಂದೇ ದಿನ ಸುಮಾರು 700ರಿಂದ 1000 ಎಕರೆಯಷ್ಟು ಜಾಗ ಬೆಂಕಿಗೆ ಆಹುತಿಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.