ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಉನ್ನತ ಸಹಾಯಕರಾದ ಸ್ಟೀಫನ್ ಮಿಲ್ಲರ್ ಕೊರೊನಾ ಸೋಂಕಿಗೆ ತುತ್ತಾಗಿದ್ದು, ಶ್ವೇತಭವನದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.
ಕಳೆದ ಐದು ದಿನಗಳಿಂದ ನಾನು ಕ್ವಾರಂಟೈನ್ಗೆ ಒಳಗಾಗಿದ್ದು, ಎಲ್ಲರಿಂದ ಪ್ರತ್ಯೇಕವಾಗಿದ್ದೇನೆ. ಪ್ರತೀ ದಿನ ಕೋವಿಡ್ ಪರೀಕ್ಷೆಗೆ ಒಳಗಾಗುತ್ತಿದ್ದೇನೆ. ಇಲ್ಲಿಯವರೆಗೆ ನನ್ನ ವರದಿ ನೆಗೆಟಿವ್ ಬಂದಿತ್ತು. ಆದರೀಗ ಕೋವಿಡ್ ಸೋಂಕು ತಗುಲಿರುವುದು ಕಂಡು ಬಂದಿದ್ದು, ಕ್ವಾರಂಟೈನ್ನಲ್ಲಿ ಇದ್ದೇನೆ ಎಂದು ಮಿಲ್ಲರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಳೆದ ಗುರುವಾರ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿತ್ತು. ನಂತರ ಅವರ ಸಹಾಯಕ ಹೋಪ್ ಹಿಕ್ಸ್ ಕೂಡ ಮಾರಕ ಸೋಂಕಿಗೆ ತುತ್ತಾಗಿದ್ದರು. ಶುಕ್ರವಾರ ಮಿಲಿಟರಿ ಆಸ್ಪತ್ರೆಗೆ ದಾಖಲಾಗಿದ್ದ ಟ್ರಂಪ್ ಸೋಮವಾರ ಬಿಡುಗಡೆ ಆಗಿದ್ದಾರೆ.
ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಕೇಯ್ಲೀ ಮೆಕ್ ಎನಾನಿ ಮತ್ತು ಮಾಧ್ಯಮ ಕಚೇರಿಯ ಮೂವರು ಸಿಬ್ಬಂದಿ ಸಹ ಸೋಂಕಿಗೆ ತುತ್ತಾಗಿದ್ದು, ಶ್ವೇತಭವನದಲ್ಲಿ ಕೆಲಸ ಮಾಡುವ ಕನಿಷ್ಠ ಮೂವರು ಪತ್ರಕರ್ತರಲ್ಲಿ ಸೋಂಕು ಕಂಡು ಬಂದಿದೆ.