ವಾಷಿಂಗ್ಟನ್: ಮಾರಣಾಂತಿಕ ಕೋವಿಡ್ 19 ಸಾಂಕ್ರಾಮಿಕ ಮತ್ತು ಹವಾಮಾನ ಬದಲಾವಣೆಯನ್ನು ಎರಡು ಪ್ರಮುಖ ಜಾಗತಿಕ ಸವಾಲುಗಳೆಂದು ಹೇಳಿರುವ ಜೋ ಬೈಡನ್, 'ಹೊಸ ಅಮೆರಿಕ ಉದಯವಾಗುತ್ತಿದೆ' ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜನವರಿ 20 ರಂದು ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ 100 ದಿನಗಳ ಬಳಿಕ ಬೈಡನ್ ಕಾಂಗ್ರೆಸ್ (ಸಂಸತ್ತು) ಜಂಟಿ ಅಧಿವೇಶನದಲ್ಲಿ ಮೊದಲ ಭಾಷಣ ಮಾಡಿದರು.
ಶತಮಾನದ ಅತ್ಯಂತ ಕೆಟ್ಟ ಸಾಂಕ್ರಾಮಿಕ ಮತ್ತು ದಶಕದ ಅತ್ಯಂತ ಭೀಕರವಾದ ಆರ್ಥಿಕ ಬಿಕ್ಕಟ್ಟನ್ನು ಎದುರಿಸಿದ ದೇಶವು ಬಿಕ್ಕಟ್ಟನ್ನು ಅವಕಾಶವಾಗಿ ಪರಿವರ್ತಿಸಿದೆ ಎಂದು ಹೇಳಿದರು.
'ಮತ್ತೆ ವಿಶ್ವವನ್ನು ಮುನ್ನಡೆಸುತ್ತಿದ್ದೇವೆ'
'ಹೊಸ ಅಮೆರಿಕ ಉದಯವಾಗುತ್ತಿದೆ. ಭಯದ ವಿರುದ್ಧ ಭರವಸೆ, ಸುಳ್ಳಿನ ವಿರುದ್ಧ ಸತ್ಯ, ಮತ್ತು ಕತ್ತಲೆಯ ವಿರುದ್ಧ ಬೆಳಕನ್ನು ದೇಶ ಆಯ್ಕೆ ಮಾಡಿಕೊಂಡಿದೆ. 100 ದಿನಗಳ ರಕ್ಷಣಾ ಹಾಗೂ ಪುನಶ್ವೇತನ ಕಾರ್ಯಗಳು ಅಮೆರಿಕವನ್ನು ಸಂಕಷ್ಟದಿಂದ ಪಾರು ಮಾಡಿದೆ. ನಾವು ಮತ್ತೆ ಕೆಲಸ ಮಾಡುತ್ತಿದ್ದೇವೆ, ಮತ್ತೆ ಕನಸು ಕಾಣುತ್ತಿದ್ದೇವೆ. ಮತ್ತೆ ವಿಶ್ವವನ್ನು ಮುನ್ನಡೆಸುತ್ತಿದ್ದೇವೆ. ಜಗತ್ತಿನಲ್ಲಿ ಅಮೆರಿಕದ ಹಿಂಜರಿಕೆಯ ಮಾತೇ ಇಲ್ಲ' ಎಂದು ಬೈಡನ್ ತಮ್ಮ ಭಾಷಣದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.
ಭಯೋತ್ಪಾದನೆಯಿಂದ ಪರಮಾಣು ಪ್ರಸರಣ, ಸಾಮೂಹಿಕ ವಲಸೆ, ಸೈಬರ್ ಭದ್ರತೆ, ಹವಾಮಾನ ಬದಲಾವಣೆ ಹಾಗೂ ಈಗಿನ ಸಾಂಕ್ರಾಮಿಕ ರೋಗಗಳಂತೆ ಯಾವುದೇ ಒಂದು ರಾಷ್ಟ್ರವು ನಮ್ಮಂತೆ ಎಲ್ಲಾ ಬಿಕ್ಕಟ್ಟುಗಳನ್ನು ಎದುರಿಸಲು ಸಾಧ್ಯವಿಲ್ಲ. ನಾವು ಮೊದಲಿನ ಸಹಜ ಸ್ಥಿತಿಗೆ ಹಿಂತಿರುಗುತ್ತಿದ್ದೇವೆ. ಆದರೆ ಏಕಾಂಗಿಯಾಗಿಯಲ್ಲ, ನಮ್ಮ ಮಿತ್ರರಾಷ್ಟ್ರಗಳ ಬದಲಾವಣೆಗೂ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ಅಮೆರಿಕಾಧ್ಯಕ್ಷರು ತಿಳಿಸಿದರು.
ಇದನ್ನೂ ಓದಿ: ಭಾರತಕ್ಕೆ 100 ಮಿಲಿಯನ್ ಡಾಲರ್ ಮೌಲ್ಯದ ವೈದ್ಯಕೀಯ ಸಾಮಗ್ರಿ ಪೂರೈಸಲಿರುವ ಅಮೆರಿಕ
ಹವಾಮಾನ ಕುರಿತ ಪ್ಯಾರಿಸ್ ಒಪ್ಪಂದ ಉಲ್ಲೇಖ
ಇನ್ನು ಹವಾಮಾನ ಬಿಕ್ಕಟ್ಟು ಅಮೆರಿಕದ ಹೋರಾಟವಲ್ಲ, ಆದರೆ ಅದು ಜಾಗತಿಕ ಬದಲಾವಣೆಯಾಗಿದೆ. ಇಂಗಾಲದ ಹೊರಸೂಸುವಿಕೆಯಲ್ಲಿ ಅಮೆರಿಕದ ಪಾಲು ಶೇ.15 ಕ್ಕಿಂತ ಕಡಿಮೆ ಇದ್ದರೆ, ಪ್ರಪಂಚದ ಉಳಿದ ರಾಷ್ಟ್ರಗಳ ಪಾಲು ಶೇ. 85 ರಷ್ಟಿದೆ. ಅದಕ್ಕಾಗಿಯೇ ನಾನು ಮೊದಲ ದಿನವೇ ಪ್ಯಾರಿಸ್ ಹವಾಮಾನ ಒಪ್ಪಂದಕ್ಕೆ ಮತ್ತೆ ಸೇರ್ಪಡೆಗೊಳ್ಳುವ ನಿರ್ಧಾರವನ್ನು ತೆಗೆದುಕೊಂಡೆ. ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ಪ್ಯಾರಿಸ್ ಹವಾಮಾನ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆದರೆ ಅವರ ಉತ್ತರಾಧಿಕಾರಿ ಡೊನಾಲ್ಡ್ ಟ್ರಂಪ್ ಇದರಿಂದ ಹೊರ ಬಂದಿದ್ದರು ಎಂದು ಬೈಡನ್ ತಮ್ಮ ನಿಲುವನ್ನು ಸಮರ್ಥಿಸಿಕೊಂಡರು.
'ಲಸಿಕೆ ಲಭ್ಯ.. ಹೋಗಿ ಹಾಕಿಸಿಕೊಳ್ಳಿ'
ದೇಶದಲ್ಲಿ 5,74,000 ಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದಿರುವ, 32.3 ಮಿಲಿಯನ್ ಜನರಿಗೆ ಅಂಟಿರುವ ಮಾರಕ ಕಾಯಿಲೆಯ ವಿರುದ್ಧ ಹೋರಾಡಲು ಲಸಿಕೆ ಪಡೆಯುವಂತೆ ಜನತೆಗೆ ಕರೆ ನೀಡಿದ್ದಾರೆ. ಅಮೆರಿಕದಲ್ಲಿ ಲಸಿಕೆ ಲಭ್ಯವಿದೆ, ಇದಕ್ಕೆ ಯಾವುದೇ ಕೊರತೆಯಿಲ್ಲ ಹೋಗಿ ಹಾಕಿಸಿಕೊಳ್ಳಿ ಎಂದು ಹೇಳಿದ್ದಾರೆ.
ಅಮೆರಿಕದಲ್ಲಿ ಸದ್ಯದ ಕೋವಿಡ್ ಪರಿಸ್ಥಿತಿ
ಯುಸ್ನಲ್ಲಿ ಕೊರೊನಾ ಸಾವು-ನೋವಿನಲ್ಲಿ ಇಳಿಕೆಯಾಗಿದೆ. ಎರಡು ಲಕ್ಷ ಸನಿಹ ಕೋವಿಡ್ ಪ್ರಕರಣಗಳು ವರದಿಯಾಗುತ್ತಿದ್ದ ದೇಶದಲ್ಲೀಗ 60 ಸಾವಿರಕ್ಕಿಂತಲೂ ಕಡಿಮೆ ಸೋಂಕಿತರು ಪತ್ತೆಯಾಗುತ್ತಿದ್ದಾರೆ.