ಸ್ಯಾನ್ ಫ್ರಾನ್ಸಿಸ್ಕೋ : ನಿರ್ಗಮಿತ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸಾಮಾಜಿಕ ಮಾಧ್ಯಮ ನಿಷೇಧ ಹೇರಿದ್ದರಿಂದ, ಸಾಮಾಜಿಕ ಜಾಲತಾಣದಲ್ಲಿ ಫೋಸ್ಟ್ ಮಾಡಲಾಗುತ್ತಿದ್ದ ಚುನಾವಣಾ ವಂಚನೆಯ ತಪ್ಪು ಮಾಹಿತಿಯು ಶೇ.73ರಷ್ಟು ಕುಸಿದಿದೆ ಎಂದು ವರದಿ ಬಹಿರಂಗಪಡಿಸಿದೆ.
ಸ್ಯಾನ್ ಫ್ರಾನ್ಸಿಸ್ಕೋ ಮೂಲದ ವಿಶ್ಲೇಷಣಾ ಸಂಸ್ಥೆ ಜಿಗ್ನಾಲ್ ಲ್ಯಾಬ್ಸ್ ನಡೆಸಿದ ಸಂಶೋಧನೆಯ ಪ್ರಕಾರ, ಜನವರಿ 8ರಂದು ಟ್ರಂಪ್ ಅವರನ್ನು ಟ್ವಿಟರ್‌ನಲ್ಲಿ ನಿಷೇಧಿಸಿದ ವಾರದಲ್ಲಿಯೇ ಚುನಾವಣಾ ವಂಚನೆಯ ಕುರಿತಾದ ವಿಷಯಗಳು ಸಾಮಾಜಿಕ ಮಾಧ್ಯಮಗಳಲ್ಲಿ 2.5 ಮಿಲಿಯನ್ ಉಲ್ಲೇಖಗಳಿಂದ 688,000 ಉಲ್ಲೇಖಗಳಿಗೆ ಇಳಿದಿದೆ.
ಕ್ಯಾಪಿಟಲ್ ಗಲಭೆಗೆ ಸಂಬಂಧಿಸಿದ ಹ್ಯಾಶ್‌ಟ್ಯಾಗ್‌ಗಳ ಬಳಕೆಯೂ ಕೂಡ ಗಣನೀಯವಾಗಿ ಕುಸಿದಿದೆ ಎಂದು ಜಿಗ್ನಾಲ್ ಕಂಡುಕೊಂಡಿದೆ. ರ್ಯಾಲಿಗೆ ಮುಂಚಿನ ವಾರದಲ್ಲಿ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಟ್ವಿಟರ್ ಮತ್ತು ಇತರ ಸಾಮಾಜಿಕ ಮಾಧ್ಯಮ ಸೇವೆಗಳಲ್ಲಿ ವ್ಯಾಪಕವಾಗಿ #FightforTrump ಎಂಬ ಹ್ಯಾಶ್‌ಟ್ಯಾಗ್‌ನ ಉಲ್ಲೇಖಗಳು ಶೇ.95ರಷ್ಟು ಕುಸಿದಿವೆ. ಹಾಗೆಯೇ #HoldTheLine ಮತ್ತು 'March for Trump ಕೂಡ ಶೇ.95ರಷ್ಟು ಇಳಿಕೆ ಕಂಡಿದೆ.
ಈ ರೀತಿಯ ಟ್ರಂಪ್ ವಿರುದ್ಧದ ಕ್ರಮಗಳು ಆನ್‌ಲೈನ್ ತಪ್ಪು ಮಾಹಿತಿಯ ಪ್ರಮಾಣವನ್ನು ಸದ್ಯದಲ್ಲಿಯೇ ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ವಾಷಿಂಗ್ಟನ್ ವಿಶ್ವವಿದ್ಯಾಲಯದ ತಪ್ಪು ಮಾಹಿತಿ ಸಂಶೋಧಕ ಕೇಟ್ ಸ್ಟಾರ್‌ಬರ್ಡ್ ಹೇಳಿದ್ದಾರೆ.