ವಿಶ್ವಸಂಸ್ಥೆ: ವಾಹನವೊಂದರಲ್ಲಿ ಐಇಡಿ ಸ್ಫೋಟಗೊಂಡು ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಸುಮಾರು ಏಳು ಮಂದಿ ಯೋಧರು ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸೆಂಟ್ರಲ್ ಮಾಲಿಯಲ್ಲಿ ನಡೆದಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.
ಮಾಲಿ ಪಶ್ಚಿಮ ಆಫ್ರಿಕಾದ ದೇಶ. ಈ ದೇಶದಲ್ಲಿ ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಯನ್ನು ನಿಯೋಜನೆ ಮಾಡಿತ್ತು. ಎಂದಿಗಿಂತಲೂ ಹೆಚ್ಚು ಮಂದಿ ಈ ಬಾರಿ ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆಯ ವಕ್ತಾರ ಸ್ಟೀಫನ್ ಡುಜಾರಿಕ್ ಹೇಳಿಕೆ ನೀಡಿದ್ದಾರೆ.
ಡೌಯೆಂಟ್ಜಾ ಪ್ರದೇಶದಿಂದ ಸೆವಾರೆಗೆ ಈ ಶಾಂತಿಪಾಲನಾ ಪಡೆ ಹೊರಟಿದ್ದು, ಬಂಡಿಯಾಗರಾ ಪ್ರದೇಶದಲ್ಲಿ ಐಇಡಿ ಸ್ಫೋಟಗೊಂಡಿದೆ. ಯುಎನ್ ಲಾಜಿಸ್ಟಿಕ್ಸ್ ಬೆಂಗಾವಲು ಪಡೆಯ ಭಾಗವಾಗಿ ಈ ಶಾಂತಿಪಾಲನಾ ಪಡೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ.
ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆ್ಯಂಟೋನಿಯೊ ಗುಟೆರೆಸ್ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಶೀಘ್ರವಾಗಿ ಕ್ರಮ ಕೈಗೊಳ್ಳುವಂತೆ ಮಾಲಿ ದೇಶದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದರ ಜೊತೆಗೆ ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದಾರೆ.
2015ರಿಂದ ಮಾಲೆಯಲ್ಲಿ ಭಯೋತ್ಪಾದನಾ ಸಂಘಟನೆಗಳ ದಾಳಿ ಆರಂಭವಾಗಿದೆ. ಅದರಲ್ಲೂ ಆಲ್ಖೈದಾದೊಂದಿಗೆ ಗುರುತಿಸಿಕೊಂಡಿರುವ ಸಂಘಟನೆಗಳು ಆಗಾಗ ದೇಶದ ನಾಗರಿಕರು ಮತ್ತು ಮಾಲಿ ಸೇನೆ ಹಾಗೂ ವಿಶ್ವ ಸಂಸ್ಥೆಯ ಶಾಂತಿ ಪಾಲನಾ ಪಡೆಯ ಮೇಲೆ ಆಗಾಗ ದಾಳಿ ಮಾಡುತ್ತಿರುತ್ತದೆ. ಈವರೆಗೂ ಯಾವುದೇ ಭಯೋತ್ಪಾದಕ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.
ಇದನ್ನೂ ಓದಿ: Exclusive: ಕೂನೂರು ಹೆಲಿಕಾಪ್ಟರ್ ದುರಂತದ ಕೊನೆ ಕ್ಷಣದ ವಿಡಿಯೋ